×
Ad

ಉಪ್ಪಿನಂಗಡಿ: ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

Update: 2021-10-06 22:27 IST

ಉಪ್ಪಿನಂಗಡಿ: ಸವಾಲಿನ ಮಧ್ಯೆ ಹೋರಾಟ ಮಾಡಿ ಗೆಲ್ಲುವುದು ಭಾರತದ ಇತಿಹಾಸ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ಇದು ಪುನಾರವರ್ತನೆಯಾಗಿದೆ. ದೇಶದ ಆರೋಗ್ಯ ಕ್ಷೇತ್ರದಲ್ಲಿ ಇದೀಗ ಮಹತ್ತರ ಬದಲಾವಣೆಗಳಾಗಿದ್ದು, ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆರೋಗ್ಯ ಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸಲು 2 ಲಕ್ಷ ಕೋ. ರೂ.ವನ್ನು ಕೇಂದ್ರ ಮೀಸಲಿಟ್ಟಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಉಪ್ಪಿನಂಗಡಿಯಲ್ಲಿ 5.07 ಕೋ. ವೆಚ್ಚದಲ್ಲಿ ನಿರ್ಮಾಣವಾದ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಬಿಜೆಪಿ ಸರಕಾರದ ಆಡಳಿತವಿದ್ದಾಗ ಒಂದೆಡೆ ಕೋವಿಡ್ - 19, ಇನ್ನೊಂದೆಡೆ ಪ್ರಾಕೃತಿಕ ವಿಕೋಪ ಸಮಸ್ಯೆಗಳು ದೇಶವನ್ನು ಗಂಭೀರವಾಗಿ ಕಾಡಿದವು. ಆದರೆ ಇಂತಹ ಗಂಭೀರ ಸಮಸ್ಯೆಗಳನ್ನು ಬಿಜೆಪಿ ಸರಕಾರ ಸವಾಲಾಗಿ ಸ್ವೀಕರಿಸಿ, ಅದಕ್ಕೆ ಬೇಕಾದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪ ಶಕ್ತಿ ಹಾಗೂ ರಾಜ್ಯ ಸರಕಾರದ ಪ್ರಯತ್ನ ಇದಕ್ಕೆ ಕಾರಣ. ಕೋವಿಡ್- 19ನ ಸಮಸ್ಯೆಗೆ ಸರಕಾರ ತ್ವರಿತವಾಗಿ ಸ್ಪಂದಿಸಿದ್ದು, ಅದು ಇನ್ನಷ್ಟು ವಿಸ್ತರಿಸದಂತೆ ತಡೆಯೊಡ್ಡಲು ಜನರ ಹಿತದೃಷ್ಟಿಯಿಂದ ಕೆಲವೊಂದು ನಿಯಮಗಳನ್ನು ಸರಕಾರ ತರುತ್ತದೆ. ಅದನ್ನು ಪಾಲಿಸಬೇಕಾಗಿರುವುದು ಜನರ ಕರ್ತವ್ಯ. ಸರಕಾರಿ ಸೊತ್ತುಗಳು ನಮ್ಮದು ಅನ್ನೋ ಮನೋಭಾವನೆ ನಮ್ಮೆಲ್ಲರದ್ದಾಗಬೇಕು. ಶುಚಿತ್ವವು ಆರೋಗ್ಯದ ಪ್ರಮುಖ ಭಾಗವಾಗಿದ್ದು, ಆದ್ದರಿಂದ ಮೊದಲ ಆದ್ಯತೆ ಇದಕ್ಕೆ ನೀಡಬೇಕು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಟಂದೂರು ಮಾತನಾಡಿ, ಇಂದು ಸರಕಾರಿ ಆಸ್ಪತ್ರೆಗಳು ಜನರ ಆರೋಗ್ಯ ರಕ್ಷಣೆಯ ಕೇಂದ್ರಗಳಾಗಿದ್ದು, ಇಲ್ಲಿನ ಸಿಬ್ಬಂದಿ ಕೊರತೆ ನೀಗಲು ಸರಕಾರದ ಮಟ್ಟದಲ್ಲಿ ಅಗತ್ಯ  ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. 

ವೇದಿಕೆಯಲ್ಲಿ ಕೆನರಾ ಬ್ಯಾಂಕ್ ಮಹಾಪ್ರಬಂಧಕ  ಯೋಗೀಶ್ ಆಚಾರ್ಯ, ಲೀಡ್ ಬ್ಯಾಂಕ್ ಪ್ರಬಂಧಕ ಪ್ರವೀಣ್ ಎಂ. ಪಿ., ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಮುಳಿಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ತಹಶೀಲ್ದಾರ್ ರಮೇಶ್‍ಬಾಬು,  ಆರ್‍ಐಡಿಪಿ ಎಂಜಿನಿಯರ್ ರಾಜೇಶ್ ರೈ ಮತ್ತಿತರರು ಉಪಸ್ಥಿತರಿದ್ದರು. 

ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ  ಸ್ವಾಗತಿಸಿದರು. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮುಷಾಕೀರ್ ಹುಸೇನ್ ಕೆ.ಐ. ವಂದಿಸಿದರು. ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಅನುದಾನವಿರಿಸಿದ ನನ್ನನ್ನು ಮರೆತರು: ಯು.ಟಿ. ಖಾದರ್  

ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ  ಪತ್ರದಲ್ಲಿ ಮಾಜಿ ಆರೋಗ್ಯ ಸಚಿವ, ಶಾಸಕ ಯು.ಟಿ. ಖಾದರ್ ರವರ ಹೆಸರು ಮುಖ್ಯ ಅತಿಥಿಗಳ ನೆಲೆಯಲ್ಲಿ ಮುದ್ರಿಸಲ್ಪಟ್ಟಿದ್ದರೂ, ಈ ಬಗ್ಗೆ ಮಾಧ್ಯಮದವರಿಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ ಅವರು,  `ಕಾರ್ಯಕ್ರಮದ ಬಗ್ಗೆ ತನಗೆ ಯಾವುದೇ ಆಮಂತ್ರಣ ನೀಡಿಲ್ಲ.  ನಾನೇ ಆರೋಗ್ಯ ಸಚಿವನಾಗಿದ್ದ ವೇಳೆ ಉಪ್ಪಿನಂಗಡಿ, ಕೊಕ್ಕಡ, ಕಡಬ ಸರಕಾರಿ ಆಸ್ಪತ್ರೆಯ ನೂತನ ಕಟ್ಟಡಕ್ಕೆ  ಅಗತ್ಯ ಅನುದಾನವನ್ನು ನೀಡಿದ್ದರೂ ಇಂದಿನ ಉದ್ಘಾಟನಾ ಕಾರ್ಯಕ್ರಮಕ್ಕೆ ನನ್ನನ್ನು ಯಾಕೆ ಮರೆತರೋ ತಿಳಿಯುತ್ತಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News