ಮಂಗಳೂರು; ಶೂಟೌಟ್ ಪ್ರಕರಣ: ಉದ್ಯಮಿ ರಾಜೇಶ್ ಪ್ರಭು ಬಂಧನ

Update: 2021-10-07 11:33 GMT
ಫೈಲ್ ಫೋಟೊ

ಮಂಗಳೂರು, ಅ.7: ಮೋರ್ಗನ್ಸ್‌ಗೇಟ್ ಶೂಟೌಟ್ ಪ್ರಕರಣದಲ್ಲಿ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಶೂಟೌಟ್‌ನಲ್ಲಿ ಪುತ್ರನಿಗೆ ಮೆದುಳು ನಿಷ್ಕ್ರಿಯಗೊಂಡ ವಿಷಯ ತಿಳಿಯುತ್ತಿದ್ದಂತೆ ಉದ್ಯಮಿ ರಾಜೇಶ್ ಪ್ರಭುಗೆ ಹೃದಯಾಘಾತ ಸಂಭವಿಸಿತ್ತು. ಆತನನ್ನು ಪೊಲೀಸ್ ವಶದಲ್ಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆಯ ವೇಳೆಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ವಿವರ: ಮೋರ್ಗನ್ಸ್‌ಗೇಟ್‌ನ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊ ಸರಕು ಸಾಗಾಟ ಸಂಸ್ಥೆಯಲ್ಲಿ ಸೆ.30ರಂದು ಅಶ್ರಫ್, ಚಂದ್ರಹಾಸ ಎಂಬವರು ಕೆಲಸಕ್ಕೆ ಸೇರಿಕೊಂಡಿದ್ದರು. ಅದೇ ದಿನ ಗೂಡ್ಸ್ ಕಂಟೈನರ್ ವಾಹನಕ್ಕೆ ಚಾಲಕ, ಕ್ಲೀನರ್‌ ಆಗಿ ಮುಂಬೈಗೆ ತೆರಳಿ ಅ.3ಕ್ಕೆ ವಾಪಸಾಗಿದ್ದರು. ಅವರಿಗೆ ಮೊದಲೇ 10 ಸಾವಿರ ರೂ. ಸಂಬಳ ನೀಡಲಾಗಿತ್ತು. ಇನ್ನುಳಿದ 4000 ರೂ.ನ್ನು ಪುನಃ ನೀಡುವುದಾಗಿ ಮಾಲಕ ರಾಜೇಶ್ ಪ್ರಭು ಎರಡು ದಿನ ಸತಾಯಿಸಿದ್ದ ಎಂದು ತಿಳಿದುಬಂದಿದೆ.

ಅ.5ರಂದು ಸಂಜೆ 3:30ಕ್ಕೆ ಕಚೇರಿಗೆ ಬಂದ ಚಾಲಕ, ಕ್ಲೀನರ್ ಬಾಕಿ ಹಣ ನೀಡುವಂತೆ ಸಂಸ್ಥೆಯ ಮಾಲಕನ ಪತ್ನಿ ಶಾಂತಲಾ ಪ್ರಭು ಅವರಲ್ಲಿ ಒತ್ತಾಯಿಸಿದ್ದರು. ಈ ವೇಳೆ ಅವರು ಪತಿ, ಪುತ್ರನನ್ನು ಕರೆಸಿಕೊಂಡಿದ್ದರು. ಈ ವೇಳೆ ಅಶ್ರಫ್, ಚಂದ್ರಹಾಸ, ರಾಜೇಶ್ ಪ್ರಭು, ಸುಧೀಂದ್ರ ಪ್ರಭು ನಡುವೆ ಮಾತಿನ ಚಕಮಕಿ ನಡೆದು ವಾಗ್ವಾದಕ್ಕೆ ಕಾರಣವಾಗಿದೆ. ತಳ್ಳಾಟದ ವೇಳೆ ರಾಜೇಶ್ ಎರಡು ಸುತ್ತಿನ ಗುಂಡು ಹಾರಿಸಿದ್ದು, ಅಶ್ರಫ್, ಚಂದ್ರಹಾಸರತ್ತ ಹಾರಿಸಿದ್ದ ಗುಂಡು ಸ್ವಂತ ಮಗ ಸುಧೀಂದ್ರನ ಎಡಗಣ್ಣಿನ ಪಕ್ಕ ಹಾದು, ತಲೆಯ ಒಳಭಾಗದಲ್ಲಿ 7-8 ಇಂಚು ಆಳದಲ್ಲಿ ಗಾಯ ಮಾಡಿತ್ತು. ಗಂಭೀರ ಗಾಯಗೊಂಡ ಪುತ್ರನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News