×
Ad

ಮಾಧ್ಯಮಗಳ ಜವಾಬ್ದಾರಿಯುತ ವರದಿಯಿಂದ ಆತ್ಮಹತ್ಯೆ ಪ್ರಮಾಣದಲ್ಲಿ ಇಳಿಕೆ ಸಾಧ್ಯ : ಡಾ.ಪಿ.ವಿ.ಭಂಡಾರಿ

Update: 2021-10-07 17:17 IST

ಉಡುಪಿ, ಅ.7: ಭಾರತದಲ್ಲಿ ಪ್ರತಿದಿನ ಸುಮಾರು 8ಲಕ್ಷ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಮಾಧ್ಯಮಗಳು ತಮ್ಮ ಜವಾಬ್ದಾರಿ ಅರಿತು ಬಹಳ ಸೂಕ್ಷ್ಮವಾಗಿ ವರದಿ ಮಾಡುವುದರಿಂದ ಶೇ.2-3ರಷ್ಟು ಆತ್ಮಹತ್ಯೆಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಹಾಗೂ ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಉಡುಪಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ರೋಟರಿ ಮಣಿಪಾಲ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗ ದಲ್ಲಿ ಡಿವಿಜಿ ಪುಣ್ಯ ಸ್ಮರಣೆ ಪ್ರಯುಕ್ತ ಮಾಧ್ಯಮದವರಿಗೆ ಗುರುವಾರ ಉಡುಪಿ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾದ ‘ಆತ್ಮಹತ್ಯೆ ನಿಯಂತ್ರಣ: ಸಾಮಾಜಿಕ ಜವಾಬ್ದಾರಿ’ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತಿದ್ದರು.

ಒಂದು ಆತ್ಮಹತ್ಯೆ ನಡೆದ 3-14 ದಿನಗಳಲ್ಲಿ ಅದೇ ಸಮಸ್ಯೆಯಿಂದ ಬಳಲುತ್ತಿ ರುವವರು ವರದಿಯ ಪ್ರಭಾವಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಗಳಿರುತ್ತದೆ. ಇಂದಿನ ಕೋವಿಡ್ ಪರಿಸ್ಥಿತಿಯಲ್ಲಿ ಹಣಕಾಸಿನ ಸಮಸ್ಯೆ, ಕುಡಿತ, ಸಾಲ, ಒಂಟಿತನ, ಕೋರೊನಾ ವೈರಸ್ ಭೀತಿಯಿಂದ ಹೆಚ್ಚಿನ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರದಿಯನ್ನು ಸೂಕ್ಷ್ಮವಾಗಿ ಅರಿತು ಮಾಡಿದರೆ ಉಳಿದವರು ಆತ್ಮಹತ್ಯೆ ಮಾಡದಂತೆ ತಡೆಯಬಹುದು ಎಂದರು.

ಒಂದು ಮಿಲಿಯನ್ ಜನ ಆತ್ಮಹತ್ಯೆ ಮಾಡಿಕೊಂಡರೆ, 10-20ಮಿಲಿಯನ್ ಜನ ಆತ್ಮಹತ್ಯೆಗೆ ಯತ್ನ ನಡೆಸುತ್ತಾರೆ. ಇದರಿಂದ 50-120 ಮಿಲಿಯನ್ ಮಂದಿ ಅದರ ಪರಿಣಾಮಕ್ಕೆ ತುತ್ತಾಗುತ್ತಾರೆ. ಒಂದು ಆತ್ಮಹತ್ಯೆಯು ಒಂದಲ್ಲ ಒಂದು ರೀತಿಯಲ್ಲಿ ಇಷ್ಟು ಮಂದಿಗೆ ಪರಿಣಾಮ ಬೀರುತ್ತದೆ. ಇಡೀ ಜಗತ್ತಿನ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.61ರಷ್ಟು ಆತ್ಮಹತ್ಯೆಗಳು ಏಷ್ಯಾ ಖಂಡದ ದೇಶ ಗಳಲ್ಲಿ ನಡೆಯುತ್ತಿವೆ ಎಂದು ಅವರು ತಿಳಿಸಿದರು.

ಆತ್ಮಹತ್ಯೆ ನಿಯಂತ್ರಣದಲ್ಲಿ ವೈದ್ಯರು ಹಾಗೂ ಮಾಧ್ಯಮದವರ ಪಾತ್ರ ಬಹಳ ಮುಖ್ಯವಾಗಿದೆ. ಆತ್ಮಹತ್ಯೆ ಕುರಿತ ವರದಿ ಮಾಡಲು ವಿಶ್ವ ಆರೋಗ್ಯ ಸಂಸ್ಥೆ, ಪ್ರೆಸ್ ಕೌನ್ಸಿಲ್ ಹಾಗೂ ಮನೋವೈದ್ಯರ ಸಂಘ ಕೆಲವೊಂದು ಮಾರ್ಗಸೂಚಿ ಗಳನ್ನು ನೀಡಿದೆ. ಮಾಧ್ಯಮಗಳು ಆತ್ಮಹತ್ಯೆ ಮಾಡಿಕೊಂಡ ರೀತಿ, ಅತಿ ವರ್ಣ ರಂಜಿತಗೊಳಿಸದೆ ಜವಾಬ್ದಾರಿಯಿಂದ ವರದಿ ಮಾಡಿದರೆ, ಕಾಪಿಕ್ಯಾಟ್ ಆತ್ಮಹತ್ಯೆ ಯನ್ನು ತಡೆಯಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂ ನಿಕೇಶನ್ ಇದರ ಮಾಧ್ಯಮ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಮತ್ತು ಸಹ ಪ್ರಾಧ್ಯಾಪಕಿ ಡಾ.ಶುಭ ಎಚ್.ಎಸ್. ಮಾತನಾಡಿ, ಮಾಧ್ಯಮಗಳು ಆತ್ಮಹತ್ಯೆ ಪ್ರಕರಣಗಳನ್ನು ಅಪರಾಧದ ದೃಷ್ಠಿಯ ಬದಲು ಆರೋಗ್ಯದ ದೃಷ್ಠಿಯಿಂದ ನೋಡಿ ವರದಿ ಮಾಡಬೇಕಾಗಿದೆ. ಆತ್ಮಹತ್ಯೆ ಸಂಬಂಧ ವಿವಿಧ ಮಾರ್ಗಸೂಚಿಗಳಿದ್ದರೂ ಎಡಿಟರ್ ಗಿಲ್, ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಅಥಾರಿಟಿಯಲ್ಲಿ ಯಾವುದೇ ಮಾರ್ಗಸೂಚಿಗಳು ಇಲ್ಲದೆ ಇರುವುದು ಖೇದನೀಯ ಎಂದರು.

ವರದಿಯಲ್ಲಿ ಒಬ್ಬ ವ್ಯಕ್ತಿ ಯಾವ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂಬುದು ಮುಖ್ಯವಾಗಿರುವುದಿಲ್ಲ. ಇದರಿಂದ ಮಾನಸಿಕವಾಗಿ ನೊಂದಿರುವ ಇತರರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ದಾರಿ ತೋರಿಸಿದಂತೆ ಆಗುತ್ತದೆ. ಜನರನ್ನು ಮಾಧ್ಯಮದ ಮೂಲಕ ಶಿಕ್ಷಿತರನ್ನಾಗಿ ಮಾಡುವ ಮೂಲಕ ಆತ್ಮಹತ್ಯೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದರು.

ಉಡುಪಿ ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಮಣಿಪಾಲ ರೋಟರಿ ಕ್ಲಬ್‌ನ ಪ್ರಶಾಂತ್ ಹೆಗ್ಡೆ, ಶ್ರೀಪತಿ, ನಾಗರಾಜ್ ಮೂರ್ತಿ ಉಪಸ್ಥಿತರಿದ್ದರು. ಮಣಿಪಾಲ ರೋಟರಿ ಅಧ್ಯಕ್ಷ ಹಾಗೂ ಮನೋ ವೈದ್ಯ ಡಾ.ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರತಿ ಜಿಲ್ಲೆಯಲ್ಲಿ ಸಹಾಯವಾಣಿ ಅಗತ್ಯ

ಬಹಳ ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸಾಕಷ್ಟು ಸುಳಿವುಗಳನ್ನು ನೀಡುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ಅವರನ್ನು ಮಾನಸಿಕ ತಜ್ಞರ ಬಳಿ ಚಿಕಿತ್ಸೆಗೆ ಒಳಪಡಿಸುವುದು ಅಗತ್ಯ. ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಸಮಾಜ ಮುಖಿ ಚಿಂತನೆ ಮಾಡುವ ಸಂಘಸಂಸ್ಥೆಗಳು ಸೇರಿ ಸಹಾಯವಾಣಿಯನ್ನು ಆರಂಭಿಸಬೇಕು. ಇದು ಉಡುಪಿ ಜಿಲ್ಲೆಯಲ್ಲಿ ಪೈಲಟ್ ಯೋಜನೆಯಾಗಿ ಕೈಗೆತ್ತಿಕೊಳ್ಳಬೇಕು.

ತಮ್ಮಲ್ಲಿ ಯಾವುದೇ ಸಮಸ್ಯೆಗಳಿದ್ದರೂ ವಿವಿಧ ಸಹಾಯವಾಣಿ (ಸರಕಾರದ ಆರೋಗ್ಯ ಸಹಾಯವಾಣಿ 104, ಸೈಕ್ಯಾಟ್ರಿ ಹೆಲ್ಪ್‌ಲೈನ್- 9108919025, ಟೆಲಿ ಆರೋಗ್ಯ ಹೆಲ್ಪ್‌ಲೈನ್- 08045901234)ಗಳಿಗೆ ಕರೆ ಮಾಡಿ ಹೇಳಿಕೊಳ್ಳಬಹುದಾಗಿದೆ ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News