×
Ad

ಮಂಗಳೂರಿಗೆ ರಾಷ್ಟ್ರಪತಿ ಆಗಮನ; ಕೆಪಿಟಿಯಿಂದ ಬಿಜೈನ ಬಟ್ಟಗುಡ್ಡದವರೆಗೆ ವಾಹನ ಸಂಚಾರ ನಿಷೇಧ

Update: 2021-10-07 17:23 IST
ರಾಷ್ಟ್ರಪತಿ ರಾಮನಾಥ ಕೋವಿಂದ್

ಮಂಗಳೂರು, ಅ.7: ರಾಷ್ಟ್ರಪತಿ ರಾಮನಾಥ ಕೋವಿಂದ್ ಮಂಗಳೂರು ನಗರಕ್ಕೆ ಆಗಮಿಸಿ, ಮಂಗಳೂರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸರ್ಕ್ಯೂಟ್ ಹೌಸ್‌ನ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮಾರ್ಪಾಡು ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ.

ಅ.7ರಂದು ಸಂಜೆ 6 ಗಂಟೆಯಿಂದ ಅ.8ರಂದು ಬೆಳಗ್ಗೆ 11 ಗಂಟೆವರೆಗೆ ವಾಹನ ಸಂಚಾರವನ್ನು ನಿಷೇಧಿಸಿ, ರಸ್ತೆ ಮಾರ್ಗ ಬದಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್‌ನಿಂದ ಸರ್ಕ್ಯೂಟ್ ಹೌಸ್ ಜಂಕ್ಷನ್ ಮುಖಾಂತರ ಬಿಜೈನ ಬಟ್ಟಗುಡ್ಡದ ರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಿ, ಕೆಲವು ಮಾರ್ಗದಲ್ಲಿ ಸಂಚರಿಸುವಂತೆ ಮಾರ್ಪಾಡುಗೊಳಿಸಿ, ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ.

ಕೆಪಿಟಿಯಿಂದ ಸರ್ಕ್ಯೂಟ್ ಹೌಸ್ ಜಂಕ್ಷನ್-ಬಟ್ಟಗುಡ್ಡೆ ಮೂಲಕ ನಗರಕ್ಕೆ ಪ್ರವೇಶಿಸುವ ವಾಹನಗಳು ನಂತೂರು ಜಂಕ್ಷನ್ ಮೂಲಕ ನಗರ ಪ್ರವೇಶಿಸಬೇಕು. ಕೆಎಸ್ಸಾರ್ಟಿಸಿ, ಬಿಜೈ ಬಟ್ಟಗುಡ್ಡೆ ಕಡೆಯಿಂದ ಕೆಪಿಟಿ ರಾಷ್ಟ್ರೀಯ ಹೆದ್ದಾರಿ ಕಡೆಗೆ ಸಂಚರಿಸುವ ವಾಹನಗಳು, ಕುಂಟಿಕಾನ ಮೂಲಕ ರಾಷ್ಟ್ರೀಯ ಹೆದ್ದಾರಿ ಕಡೆಗೆ ಚಲಿಸುವುದು.

ಬಂಟ್ಸ್ ಹಾಸ್ಟೆಲ್ ಸರ್ಕಲ್, ಕದ್ರಿ ಕಂಬಳ ರಸ್ತೆ, ಬಿಜೈ ಬಟ್ಟಗುಡ್ಡೆ ಮುಖಾಂತರ ರಾ.ಹೆ.ಯಲ್ಲಿನ ಕೆಪಿಟಿ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಬಂಟ್ಸ್ ಹಾಸ್ಟೆಲ್ ಸರ್ಕಲ್- ಮಲ್ಲಿಕಟ್ಟೆ ಮೂಲಕ ರಾ.ಹೆ.ಯಲ್ಲಿನ ನಂತೂರು ಜಂಕ್ಷನ್ ಮುಖಾಂತರ ಮುಂದುವರಿಯಬೇಕು.

ಈ ತಾತ್ಕಾಲಿಕ ಅಧಿಸೂಚನೆಯು ಗೌರವಾನ್ವಿತ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಬೆಂಗಾವಲು ವಾಹನಗಳು ಹಾಗೂ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಅನ್ವಯಿಸುವುದಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News