ಬಂಟ್ವಾಳ: ಹಸಿ ತ್ಯಾಜ್ಯ ಸಾಗಿಸುವುದನ್ನು ವಿರೋಧಿಸಿ ಸಜಿಪನಡು ಗ್ರಾಪಂನಿಂದ ಪ್ರತಿಭಟನೆ

Update: 2021-10-07 13:48 GMT

ಬಂಟ್ವಾಳ, ಅ.7: ಸಜಿಪನಡು ಗ್ರಾಮದ ಕಂಚಿನಡ್ಕದವು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಂಟ್ವಾಳ ಪುರಸಭೆ ಹಸಿಕಸ ಸಾಗಿಸುವುದನ್ನು ವಿರೋಧಿಸಿ ಸಜಿಪನಡು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಬಂಟ್ವಾಳ ಪುರಸಭೆಯ ಮುಂಭಾಗ ಗುರುವಾರ 'ವಿಶಿಲ್ ಮಾರ್ಚ್'ನೊಂದಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಫೌಝಿಯಾ ಬಾನು, ಪುರಸಭೆ ಮುಂದೆ ನಾವಿಂದು ನಡೆಸುತ್ತಿರುವ ಈ ಪ್ರತಿಭಟನೆ ನಮ್ಮ ಪ್ರಥಮ ಹೆಜ್ಜೆಯಾಗಿದ್ದು ಇದಕ್ಕೆ ಸ್ಪಂದಿಸದಿದ್ದರೆ ಬಂಟ್ವಾಳ ಮತ್ತು ಮಂಗಳೂರು ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಅದಕ್ಕೂ ಸ್ಪಂದನೆ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ನಮ್ಮ ನ್ಯಾಯಯುಕ್ತ ಬೇಡಿಕೆಗಳನ್ನು ಈಡೇರಿಸುವವರೆಗೆ ಯಾವುದೇ ಕಾರಣಕ್ಕೂ ಬಂಟ್ವಾಳದ ತ್ಯಾಜ್ಯವನ್ನು ಕಂಚಿನಡ್ಕಪದವಿಗೆ ತರಲು ಬಿಡುವುದಿಲ್ಲ. ಪುರಸಭೆಯ ಮುಖ್ಯಾಧಿಕಾರಿಗೆ ಬಡವರ ವೇದನೆ ಅರ್ಥವಾಗುತ್ತಿಲ್ಲ. ಜಿಲ್ಲಾಧಿಕಾರಿಯ ಆದೇಶವನ್ನು ಪಾಲಿಸದ ಅವರು ಮುಖ್ಯಾಧಿಕಾರಿ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು ಎಂದು ದೂರಿದರು.

ಸಜಿಪನಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ನಾಸೀರ್ ಮಾತನಾಡಿ, ಕಂಚಿನಡ್ಕ ಪದವು ತ್ಯಾಜ್ಯ ಘಟಕದ ವಿರುದ್ಧ ನಾವು ದಶಕದಿಂದ ಹೋರಾಟ ನಡೆಸುತ್ತಿದ್ದೇವೆ. ಉನ್ನತ ಅಧಿಕಾರಿಗಳು ಅಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡುವುದು ಸೂಕ್ತ ಅಲ್ಲ ಎನ್ನುತ್ತಾರೆ. ಆದರೆ ಪುರಸಭೆಯ ಮುಖ್ಯಾಧಿಕಾರಿ ಉನ್ನತ ಅಧಿಕಾರಿಗಳ ಆದೇಶವನ್ನು ಧಿಕ್ಕರಿಸುತ್ತಿದ್ದಾರೆ ಎಂದು ಹೇಳಿದರು.

ತ್ಯಾಜ್ಯ ಘಟಕ ನಿರ್ಮಾಣದ ಆರಂಭದಲ್ಲಿ ನಮ್ಮ ಹೋರಾಟ ಆರಂಭಗೊಂಡಿತ್ತು. ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸದೆ ಹಾಗೂ ಜಿಲ್ಲಾಧಿಕಾರಿಯ ಆದೇಶ ಉಲ್ಲಂಘಿಸಿ ಹಸಿ ತ್ಯಾಜ್ಯ ತಂದು ರಾಶಿ ಹಾಕಲಾಗುತ್ತಿದೆ. ಇದೀಗ ನಮ್ಮ ಎರಡನೇ ಹಂತದ ಹೋರಾಟವನ್ನು ಆರಂಭಿಸಿದ್ದೇವೆ. ನ್ಯಾಯ ಸಿಗುವವರೆಗೆ ವಿವಿಧ ಹಂತದ ಹೋರಾಟಗಳನ್ನು ರೂಪಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಗ್ರಾಪಂ ಉಪಾಧ್ಯಕ್ಷ ಎಸ್.ಎನ್. ಅಬ್ದುಲ್ ರಹಿಮಾನ್, ಪ್ರಮುಖರಾದ ಸುರೇಶ್ ಬಂಗೇರ ಹಾಗೂ ಸ್ಥಳೀಯ ನಿವಾಸಿ ಮಹಿಳೆಯರು ಮಾತನಾಡಿ ಕಸವನ್ನು ರಾಶಿ ಹಾಕುವುದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ತಿಳಿಸಿ ಮುಂದಕ್ಕೆ ಏನಾದರೂ ತೊಂದರೆಯಾದರೆ ಪುರಸಭೆಯೇ ಹೊಣೆ ಎಂದರು.

ಗ್ರಾಪಂ ಸದಸ್ಯರಾದ ಇಸ್ಮಾಯಿಲ್ ಗೋಳಿಪಡ್ಪು, ಸುಶೀಲ, ಶೋಭಾ, ಬಬಿತಾ, ಮಮ್ತಾಝ್, ಬೀಫಾತುಮ್ಮ ಪ್ರಮುಖರಾದ ಐವನ್, ರಶೀದ್ ಸಜಿಪ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಪ್ರತಿಭಟ‌ನಕಾರರು ಸಜಿಪನಡು ಗ್ರಾಮದಿಂದ ಬಂಟ್ವಾಳ ಪುರಸಭೆ ವರೆಗೆ 'ವಿಶಲ್' ಊದುತ್ತಾ, ಕಪ್ಪು ಬಟ್ಟೆ ಧರಿಸಿ ಮೆರವಣಿಗೆ ನಡೆಸಿದರು. ಪ್ರತಿಭಟನಾ ಸಭೆಯ ಬಳಿಕ ಬಂಟ್ವಾಳ ತಾಲೂಕು ಕಚೇರಿಯ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ನರೇಂದ್ರನಾಥ ಭಟ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News