ಗೌರವದೊಂದಿಗೆ ಕೆಲಸ ಮಾಡುವುದು ಮಹಿಳೆಯ ಮೂಲಭೂತ ಹಕ್ಕು : ನ್ಯಾ. ಶರ್ಮಿಳಾ
ಉಡುಪಿ, ಅ.7: ಮಹಿಳೆಯರು ತಾವು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಪುರುಷರ ಯಾವುದೇ ಕಿರುಕುಳಕ್ಕೆ ಒಳಗಾಗದೇ ಗೌರವಯುತವಾಗಿ ಕೆಲಸ ಮಾಡುವುದು ಮಹಿಳೆಯ ಮೂಲಭೂತ ಹಕ್ಕು ಎಂದು ವಿಶಾಖಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಹೇಳಿದ್ದಾರೆ.
ಗುರುವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತ ಆಶ್ರಯ ದಲ್ಲಿ ದೇಶದ ಸ್ವಾತಂತ್ರೋತ್ಸವದ 75ನೇ ವಾರ್ಷಿಕೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳದ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ವಲಯಗಳಲ್ಲಿ ಪುರುಷರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರು ತಮ್ಮ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದಿಂದ, ದೈಹಿಕವಾಗಿ ಮಾತ್ರ ವಲ್ಲದೇ ಮಾನಸಿಕವಾಗಿ ತೀವ್ರ ಹಿಂಸೆಗೆ ಒಳಗಾಗುತ್ತಾರೆ. ಇಂತಹ ದೌರ್ಜನ್ಯಗಳ ವಿರುದ್ಧ ಮಹಿಳೆಯರ ರಕ್ಷಣೆಗಾಗಿ ಸರ್ಕಾರವು ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಣೆ) ಅಧಿನಿಯಮ 2013ನ್ನು ಜಾರಿಗೆ ತಂದಿದ್ದು, ಈ ಕುರಿತು ಎಲ್ಲಾ ಮಹಿಳೆಯರು ಸೂಕ್ತ ಅರಿವು ಹೊಂದಿರುವಂತೆ ಮತ್ತು ದೌರ್ಜನ್ಯಕ್ಕೆ ಒಳಗಾದಲ್ಲಿ ಸೂಕ್ತ ಕಾನೂನು ನೆರವು ಪಡೆಯುವಂತೆ ನ್ಯಾ.ಶರ್ಮಿಳಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ವಿಜಯ್ ವಾಸು ಪೂಜಾರಿ ಮಾತನಾಡಿ, ಮಹಿಳೆ ಕೆಲಸ ನಿರ್ವಹಿಸುವ ಸ್ಥಳ ಎಂದರೆ ಸರ್ಕಾರಿ ಕಚೇರಿ ಮಾತ್ರವಲ್ಲದೇ ಎಲ್ಲಾ ಖಾಸಗಿ ಸಂಸ್ಥೆಗಳ ಮತ್ತು ಖಾಯಂ, ಗುತ್ತಿಗೆ, ಅರೆಕಾಲಿಕ, ಹೊರಗುತ್ತಿಗೆ , ದಿನಗೂಲಿ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು ಸಹ ಈ ವ್ಯಾಪಿಗೆ ಬರಲಿದ್ದು, ಇವರ ಮೇಲೆ ಕೆಲಸ ಮಾಡುವ ಸ್ಥಳದಲ್ಲಿ ಒಂದಲ್ಲ ಒಂದು ಕಾರಣದಿಂದ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದೆ ಎಂದರು.
ಬಲಿಷ್ಠವಾದ ಕಾನೂನಿನ ಬೆಂಬಲ ಹೊಂದಿದ್ದರೂ ಪ್ರಸುತ್ತ ಕಾಲದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿವೆ ಎಂದ ಅವರು, ಮಹಿಳೆಯರು ಕೆಲಸ ನಿರ್ವಹಿಸುವ ಎಲ್ಲಾ ವಲಯಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯವಾಗಿದ್ದು, ಸಮಿತಿಯನ್ನು ರಚಿಸಿದೇ ಇರುವ ಸಂಸ್ಥೆಗಳಿಗೆ 50,000 ರೂ.ನಿಂದ 1ಲಕ್ಷದವರೆಗೆ ದಂಡ ವಿಧಿಸುವುದು ಸೇರಿದಂತೆ, ಪರವಾನಗಿಯನ್ನು ರದ್ದುಪಡಿಸುವ ಅವಕಾಶ ಕೂಡಾ ಕಾನೂನಿನಲ್ಲಿ ಇದ್ದು, ದೌರ್ಜನ್ಯಕ್ಕೆ ಒಳಗಾದ ಮಹಿಳೆ 90 ದಿನಗಳ ಒಳಗೆ ಸಮಿತಿಗೆ ದೂರು ನೀಡಬಹುದು ಎಂದರು.
ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಪ್ರತೀ 6 ತಿಂಗಳಿಗೊಮ್ಮೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ಕುರಿತು ಮಾಹಿತಿಯನ್ನು ಅದು ರಾಜ್ಯಕ್ಕೆ ಸಲ್ಲಿಸಬೇಕು ಎಂದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ಶೇಷಪ್ಪ ಉಪಸ್ಥಿತರಿದ್ದರು.
ಮಹಿಳಾ ಆಭಿವೃದ್ದಿ ನಿಗಮದ ನಿರೀಕ್ಷಕಿ ಚಂದ್ರಿಕಾ ಎಸ್ ನಾಯಕ್ ಸ್ವಾಗತಿಸಿದರು. ಶಾರದಾ ವಂದಿಸಿದರು.