ನಾಲ್ಕೈದು ದಿನದಲ್ಲಿ ಕಲ್ಲಿದ್ದಲು ಸಮಸ್ಯೆ ಪರಿಹಾರ: ಸಚಿವ ಸುನೀಲ್
ಉಡುಪಿ, ಅ.8: ಕಲ್ಲಿದ್ದಲು ಕೊರತೆಯಿಂದ ರಾಜ್ಯದ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಸ್ಥಗಿತಗೊಂಡಿದ್ದು, ಅತೀ ಶೀಘ್ರವೇ ಕಲ್ಲಿದಲ್ಲು ಪೂರೈಕೆ ಮಾಡಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ಈ ವಿಚಾರದಲ್ಲಿ ರಾಜ್ಯದ ಜನ ಆತಂಕಕ್ಕೆ ಒಳ ಗಾಗುವ ಅಗತ್ಯವಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆಗಾಲ ಆಗಿರುವುದರಿಂದ ಇಡೀ ದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ವ್ಯತ್ಯಯವಾಗಿದೆ. ಕಳೆದ ಹತ್ತು ಹದಿನೈದು ದಿನಗಳಿಂದ ಈ ಸಮಸ್ಯೆ ಇದೆ. ಇಂದು ಬೆಳಗ್ಗೆಯೂ ಕೇಂದ್ರ ಸಚಿವರ ಜೊತೆ ಮಾತನಾಡಿ, ಕರ್ನಾಟಕ ದೊರೆಯಬೇಕಾದ ಪಾಲನ್ನು ಸರಬರಾಜು ಮಾಡುವಂತೆ ಹೇಳಿದ್ದೇನೆ. ಆದುದರಿಂದ ಒರಿಸ್ಸಾ ಮತ್ತು ಮಹಾರಾಷ್ಟ್ರದಿಂದ ಕಲ್ಲಿದ್ದಲು ಪೂರೈಕೆ ಆಗಲಿದೆ. ಮುಂದಿನ ನಾಲ್ಕೈದು ದಿನದಲ್ಲಿ ಸಮಸ್ಯೆಗಳು ಬಗೆಹರಿಯಲಿವೆ ಎಂದರು.
ಹಿರಿಯ ಅಧಿಕಾರಿಗಳ ಜೊತೆ ಇಂದು ಮಾತುಕತೆ ಮಾಡಲಾಗಿದೆ. ಬಳ್ಳಾರಿ ಮತ್ತು ರಾಯಚೂರಿ ಸ್ಥಾವರದಲ್ಲೂ ಸಣ್ಣಪುಟ್ಟ ಸಮಸ್ಯೆಗಳು ಆಗಿವೆ. ಅಲ್ಲಿಗೆ ಶೀಘ್ರ ಕಲ್ಲಿದ್ದಲು ಪೂರೈಕೆ ಮಾಡಲಾಗುವುದು. ಇಂದು ರಾತ್ರಿ ಮತ್ತೊಮ್ಮೆ ಕೇಂದ್ರ ಸಚಿವರ ಜೊತೆ ಮಾತನಾಡುತ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿ ಪ್ರವಾಸದಲ್ಲಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.