×
Ad

ದಸರಾ ಮುಗಿದ ತಕ್ಷಣ ಒಂದನೇ ತರಗತಿ, ಬಿಸಿಯೂಟ ಆರಂಭ: ಸಚಿವ ಬಿ.ಸಿ.ನಾಗೇಶ್

Update: 2021-10-08 20:03 IST

ಉಡುಪಿ, ಅ.8: ರಾಜ್ಯದಲ್ಲಿ ಕೊರೋನ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ. ಹಲವಾರು ಜಿಲ್ಲೆಯಲ್ಲಿ ಪಾಸಿಟಿವಿಟಿ ಶೂನ್ಯಕ್ಕೆ ಬಂದಿದೆ. ಆದುದರಿಂದ ಶಾಲೆ ಆರಂಭಿಸಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದುದರಿಂದ ದಸರಾ ಮುಗಿದ ತಕ್ಷಣವೇ ಒಂದನೇ ತರಗತಿಯಿಂದ ಶಾಲೆ ಹಾಗೂ ಬಿಸಿಯೂಟ ಆರಂಭಿಸಲಾಗುವುದೆಂದು ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಉಡುಪಿ ವಳಕಾಡು ಸಂಯುಕ್ತ ಸರಕಾರಿ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಮುಖ್ಯ ಮಂತ್ರಿಗಳು ಬೆಂಗಳೂರಿನಲ್ಲಿ ಟಾಸ್ಕ್‌ ಪೋರ್ಸ್ ಸಭೆಯನ್ನು ಕರೆಯಲಿದ್ದು, ಅವರು ಕೂಡ ಶೀಘ್ರ ಶಾಲೆ ಆರಂಭಿಸಲು ಆಸಕ್ತಿ ತೋರಿದ್ದಾರೆ. ದಸರಾ ಮುಗಿದ ತಕ್ಷಣ ಶಾಲೆಗಳಲ್ಲಿ ಬಿಸಿಊಟ ಕೂಡ ಆರಂಭಿಸಲಾಗುವುದು. ಆಯಾ ಜಿಲ್ಲೆಯ ಅಧಿಕಾರಿಗಳಿಗೆ ಎಲ್ಲಾ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದರು.

ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಮೇರೆಗೆ ಶೀಘ್ರ ಶಾಲೆ ಆರಂಭಿಸುತ್ತೇವೆ. ಎಲ್ಲರಿಗೂ ಭೌತಿಕ ತರಗತಿಯನ್ನು ಕಡ್ಡಾಯ ಮಾಡಿಲ್ಲ. ಮುಂದೆಯೂ ಕಡ್ಡಾಯ ಮಾಡಲ್ಲ. ಆನ್‌ಲೈನ್ ಹಾಗೂ ಆಫ್‌ಲೈನ್‌ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿವೆ. ಈಗ ಆರಂಭವಾಗಿರುವ ಶಾಲೆಗಳ ಹಾಜರಾತಿ ತೃಪ್ತಿಕರವಾಗಿದೆ. ಆನ್‌ಲೈನ್ ತರಗತಿಯಿಂದ ಕೆಳ ಗ್ರಾಮೀಣ ಮಕ್ಕಳಿಗೆ ತೊಂದರೆ ಆಗಿದೆ. ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮಕ್ಕಳ ಹಾಜರಾತಿ ಶೇ.90ರಷ್ಟು ಇದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬೇರೆ ಬೇರೆ ಕಾರಣಗಳಿಂದ ಕಳೆದ ಮೂರು ವರ್ಷ ಶಿಕ್ಷಕ ನೇಮಕಾತಿ ಆಗಿಲ್ಲ. ಸರಕಾರ 10ಸಾವಿರ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನಿಸಿದ್ದರೆ ಅದರಲ್ಲಿ 3000 ಮಾತ್ರ ಅರ್ಹ ಶಿಕ್ಷಕರು ಆಯ್ಕೆಯಾಗಿರುವುದು. ನಮ್ಮಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಶಿಕ್ಷಕರ ಕೊರತೆ ಇಲ್ಲ. ಆದರೆ 6-8 ತರಗತಿವರೆಗೆ ಶಿಕ್ಷಕರ ಕೊರತೆ ಇದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಹೇಗೆ ಪರಿಹರಿಸಬಹುದು ಎಂಬುದಾಗಿ ಶಾಸಕರ ಜೊತೆ ಚರ್ಚಿಸಲಾಗುವುದು. ಅಲ್ಲದೆ ಪ್ರತಿ ಗ್ರಾಮ ಮಟ್ಟಕ್ಕೆ ಒಂದು ಶಾಲೆ ಸ್ಥಾಪಿಸಬೇಕೆಂಬ ಯೋಚನೆಗಳನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರು ಶಾಲೆಯ ಹಳೆ ವಿದ್ಯಾರ್ಥಿಗಳು ನವೀಕರಣ ಗೊಳಿಸಿರುವ ಶ್ರದ್ಧಾ ವಾಚನಾಲಯವನ್ನು ಉದ್ಘಾಟಿಸಿ ದರು. ತರಗತಿಗಳಿಗೆ ಭೇಟಿ ನೀಡಿ ಮಕ್ಕಳು ಹಾಗೂ ಶಿಕ್ಷಕರ ಜೊತೆ ಮಾತುಕತೆ ನಡೆಸಿದರು. ಉಡುಪಿ ಶಾಸಕ ಕೆ.ರಘುಪತಿ ಭಟ್, ಡಿಡಿಪಿಐ ಎನ್.ಎಚ್.ನಾಗೂರ, ಬಿಇಓ ನಾಗೇಂದ್ರಪ್ಪ, ಡಯಟ್ ಪ್ರಾಂಶುಪಾಲ ವೇದಮೂರ್ತಿ ಆಚಾರ್ಯ, ಶಾಲಾ ಮುಖ್ಯೋ ಪಾಧ್ಯಾಯಿನಿ ನಿರ್ಮಲಾ ಬಿ., ಹಳೆ ವಿದ್ಯಾರ್ಥಿ ಸಂಘಙದ ಅಧ್ಯಕ್ಷ ನಾಗ ಭೂಷಣ ಶೇಟ್, ಎಸ್‌ಡಿಎಂಸಿ ಉಪಾಧ್ಯಕ್ಷ ಶ್ಯಾಂ ಪ್ರಸಾದ್ ಕುಡ್ವ, ರವಿರಾಜ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಆಧಾರದಲ್ಲಿ ಶಾಲಾರಂಭ’

ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯ ಆಧಾರದ ಮೇಲೆ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದೇವೆ. ಅದಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಸಚಿವ ನಾಗೇಶ್ ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನವನ್ನು ಜಿಲ್ಲಾಮಟ್ಟದಲ್ಲಿ ಯೋಚನೆ ಮಾಡಲಾಗುತ್ತಿದೆ. ಅಭ್ಯಾಸದ ಕೋರ್ಸ್‌ಗಳಿಗೆ ಸ್ಥಳೀಯವಾಗಿರುವ ವಿಚಾರವನ್ನು ತೆಗೆದುಕೊಳ್ಳಲಾಗುವುದು. ಕರಾವಳಿಯಲ್ಲಿ ಮೀನುಗಾರಿಕೆ, ಕೃಷಿ ತಂತ್ರಜ್ಞಾನ ಅಥವಾ ಉಪ್ಪು ನೀರಿನಲ್ಲಿ ಬಳಕೆ ಕುರಿತು ಹೇಳಿ ಕೊಡಬೇಕೆ ಎಂಬುದರ ಕುರಿತು ಚಿಂತನೆ ಮಾಡಲಾಗುತ್ತದೆ. ಹೀಗೆ ಆಯಾ ರಾಜ್ಯದ ಪಠ್ಯೇತರ ಚಟುವಟಿಕೆಗಳ ಆಧಾರದಲ್ಲಿ ರಾಷ್ಟ್ರೀಯ ಪಠ್ಯೇತರ ಚಟುವಟಿಕೆಗಳನ್ನು ತಯಾರಿಸಲಾಗುತ್ತದೆ ಎಂದು ಅವರು ಹೇಳಿದರು.

‘ಪಠ್ಯದಲ್ಲಿ ವಿವೇಕಾನಂದರ ಭಾಷಣ ತಿರುಚಲಾಗಿದೆ’

ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತಿರ್ಥರ ಆಯ್ಕೆಗೆ ವಿರೋಧ ವ್ಯಕ್ತವಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರೋಹಿತ್ ಚಕ್ರತೀರ್ಥರ ಆಯ್ಕೆಯನ್ನು ಪ್ರಗತಿಪರರು ವಿರೋಧಿಸುತ್ತಿದ್ದಾರೆ. ಈಗ ಎಲ್ಲವನ್ನೂ ವಿರೋಧಿಸುವ ಮಾನಸಿಕತೆ ಬಂದುಬಿಟ್ಟಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಹೆಚ್ಚು ದಿನ ಕೂತ ಅನುಭವ ಇಲ್ಲ. ಹಾಗಾಗಿ ವಿರೋಧ ಪಕ್ಷದ ಸಂಸ್ಕೃತಿ ಕಾಂಗ್ರೆಸ್ ಕಲಿತಿಲ್ಲ ಎಂದು ಟೀಕಿಸಿದರು.

ಸಮಿತಿ ಅವಶ್ಯಕತೆ ಇಲ್ಲದಿದ್ದರೆ ಬರಗೂರು ರಾಮಚಂದ್ರಪ್ಪರನ್ನು ಯಾಕೆ ಈ ಹಿಂದೆ ಅಧ್ಯಕ್ಷ ಮಾಡಿದ್ದೀರಿ. ಈಗಿನ ಪಠ್ಯ ಪುಸ್ತಕಗಳನ್ನು ನೋಡಿದರೆ ಜನ ನಮ್ಮನ್ನು ಹಿಡ್ಕೊಂಡು ಹೊಡೆಯಬೇಕಿತ್ತು. ವಿವೇಕಾನಂದರ ಭಾಷಣವನ್ನೇ ಪಠ್ಯದಲ್ಲಿ ತಿರುಚಲಾಗಿದೆ. ಜ್ಞಾನಪೀಠ ಪಡೆದವರ ಪಾಠವನ್ನೇ ಕಿತ್ತು ಹಾಕ ಲಾಗಿದೆ. ವಾಲ್ಮೀಕಿಗೆ ಏಕವಚನವನ್ನು ಬಳಸಲಾಗಿದೆ. ಪುಸ್ತಕದ ಬಗ್ಗೆ ಸಾರ್ವಜನಿಕ ವಾಗಿ ಸಾವಿರಾರು ದೂರುಗಳು ಬಂದಿವೆ. ವೈಯಕ್ತಿಕ ವೈಚಾರಿಕತೆಯಲ್ಲಿ ಮುಳುಗಿರುವವರು ಮಾತ್ರ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ತಾವು ಮಾಡಿದ ತಪ್ಪುಎಲ್ಲಿ ಜಗಜ್ಜಾಹೀರಾಗಿತ್ತೋ ಎಂಬ ಭಯ ಕೆಲರಿಗೆ ಇದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News