ಬ್ರಹ್ಮಾವರಕ್ಕೆ ಕೃಷಿ ಕಾಲೇಜು ಮಂಜೂರು ಮಾಡಿಸಲು ಸಿಎಂ ಮೇಲೆ ಒತ್ತಡ: ಸಚಿವ ಸುನೀಲ್‌ ಕುಮಾರ್

Update: 2021-10-08 15:00 GMT

ಬ್ರಹ್ಮಾವರ, ಅ.8: ಬ್ರಹ್ಮಾವರ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ಕಾಲೇಜು ಆರಂಭಿಸಬೇಕೆಂಬ ಬೇಡಿಕೆ ಬಹುಕಾಲದ್ದು. ಈ ಬಾರಿ ಜಿಲ್ಲೆಯ ಜನಪ್ರತಿನಿಧಿಗಳೆಲ್ಲಾ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರ ಮೇಲೆ ಒತ್ತಡ ಹೇರಿ ಇಲ್ಲಿಗೆ ಕೃಷಿ ಕಾಲೇಜನ್ನು ಮಂಜೂರು ಮಾಡಿಸಲು ಎಲ್ಲಾ ಪ್ರಯತ್ನ ನಡೆಸುವುದಾಗಿ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ್ ಹೇಳಿದ್ದಾರೆ.

ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಮತ್ತು ಉಳ್ಳಾಲ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಬ್ರಹ್ಮಾವರ, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಉಡುಪಿ ಮತ್ತು ದಕ್ಷಿಣ ಕನ್ನಡ, ಜಿಲ್ಲಾ ಕೃಷಿಕ ಸಮಾಜ ಉಡುಪಿ ಮತ್ತುದಕ್ಷಿಣ ಕನ್ನಡ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಇವರ ಸಹಯೋಗದೊಂದಿಗೆ ಆಯೋಜಿಸಿದ ಕೃಷಿ ಮಹೋತ್ಸವ -2021ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೃಷಿ ವಿಜ್ಞಾನ ಕೇಂದ್ರದ ಬಳಿ 350 ಎಕರೆಗಳ ವಿಶಾಲ ಪ್ರದೇಶವಿದೆ. ಕೃಷಿಗೆ ಸಂಬಂಧಿಸಿದಂತೆ ಇಲ್ಲಿ ಒಳ್ಳೆಯ ಸಂಶೋಧನೆಗಳೂ ನಡೆಯುತ್ತಿವೆ. ಇಲ್ಲಿ ಕೃಷಿ ಕಾಲೇಜುಗಳನ್ನು ಪ್ರಾರಂಭಿಸುವುದರಿಂದ ಉಭಯ ಜಿಲ್ಲೆಗಳಲ್ಲಿ ಕೃಷಿಗೆ ಇನ್ನಷ್ಟು ಉತ್ತೇಜನ ಸಿಕ್ಕಂತಾಗುತ್ತದೆ. ಯುವಜನತೆಯೂ ಕೃಷಿಯತ್ತ ಸೆಳೆಯಲ್ಪಡುತ್ತಾರೆ ಎಂದ ಸಚಿವ ಸುನೀಲ್, ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯಮಶೀಲ ತೆಗೆ ಆದ್ಯತೆ ದೊರಕಬಹುದು. ಈ ನಿಟ್ಟಿನಲ್ಲಿ ಕೃಷಿ ವಿಶವ್ವಿದ್ಯಾಲಯ ಹಾಗೂ ಕಾಲೇಜುಗಳು ಕಾರ್ಯನಿರ್ವಹಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಕೊರೋನದಿಂದ ಎಲ್ಲಾ ಕ್ಷೇತ್ರಗಳಲ್ಲಿ ಹಿನ್ನಡೆ ಉಂಟಾಗಿದ್ದರೂ, ಕೃಷಿ ಕ್ಷೇತ್ರದ ವ್ಯಾಪಕತೆ ಹೆಚ್ಚಾಗಿರುವುದು ಕಂಡುಬಂದಿದೆ. ಒಂದು ಅಂದಾಜಿನಂತೆ ಶೇ.7ರಷ್ಟು ಕೃಷಿ ಚಟುವಟಿಕೆ ಹೆಚ್ಚಾಗಿದೆ. ಜನರು ಕೃಷಿ ಸೇರಿದಂತೆ ಮೂಲ ಕಸುಬಿನತ್ತ ಹೆಚ್ಚೆಚ್ಚು ಒಲವು ತೋರಿಸುತಿದ್ದಾರೆ. ಹೀಗಾಗಿ ಜನತೆಗೆ ಕೃಷಿ ಕ್ಷೇತ್ರದ ಮೇಲೂ ಆಸಕ್ತಿ ಹೆಚ್ಚಾಗುತ್ತಿದ್ದು, ಇದು ಒಳ್ಳೆಯ ಬೆಳವಣಿಗೆ. ಇದರೊಂದಿಗೆ ಕೃಷಿ ಪ್ರದೇಶಗಳ ವಿಸ್ತರಣೆ ಸಹ ಆಗಬೇಕು ಎಂದು ಅವರು ತಿಳಿಸಿದರು.

ಈಗ ಯುವಜನತೆ ಕೃಷಿ ಚಟುವಟಿಕೆಗಳತ್ತ ದೊಡ್ಡ ಪ್ರಮಾಣದಲ್ಲಿ ಆಸಕ್ತಿ ಮತ್ತು ಕುತೂಹಲವನ್ನು ತೋರಿಸುತ್ತಿದೆ. ಇದು ನಮ್ಮೆಲ್ಲರ ಅಪೇಕ್ಷೆ ಕೂಡಾ ಆಗಿದೆ. ಕಾರ್ಲಕಜೆ ತಳಿಯ ಅಭಿವೃದ್ಧಿಗೆ ಕಳೆದ ಒಂದೂವರೆ ವರ್ಷದಿಂದ ತಯಾರಿ ನಡೆಯುತ್ತಿದೆ. ಇದಕ್ಕೆ ಎದುರಾಗಿರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಿಕೊಂಡು ಶೀಘ್ರದಲ್ಲಿ ಇದನ್ನು ಅಧಿಕೃತವಾಗಿ ಕೃಷಿ ಇಲಾಖೆಗೆ ಸೇರ್ಪಡೆ ಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು. ಇದರೊಂದಿಗೆ ಅವರು ಉಡುಪಿ ಶಾಸಕ ರಘುಪತಿ ಭಟ್ ತಮ್ಮ ಕ್ಷೇತ್ರದಲ್ಲಿ ನಡೆಸುತ್ತಿರುವ ಹಡೀಲು ಗದ್ದೆ ಕೃಷಿ ಅಭಿಯಾನವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಐದು ಹೊಸ ತಳಿಗಳನ್ನು -ಸಹ್ಯಾದ್ರಿ ಬ್ರಹ್ಮ, ಸಹ್ಯಾದ್ರಿ ಪಂಚಮುಖಿ, ಕಜೆ 25-9 ತಳಿ- ಸಚಿವರು ಬಿಡುಗಡೆ ಗೊಳಿಸಿದರು. ಅಲ್ಲದೇ ಭತ್ತದ ಕೃಷಿಯಲ್ಲಿ ಯಾಂತ್ರಿಕತೆಯನ್ನು ಬಳಸಿಕೊಂಡ ಯಶಸ್ವಿಯಾದ ರೈತರಾದ ಬಾರಕೂರಿನ ಬಿ.ಸೀತಾರಾಮ ಶೆಟ್ಟಿ, ಚಾಂತಾರಿನ ಗುಲಾಬಿ ನಾಯರ್ತಿ, ಬ್ರಹ್ಮಾವರದ ರಾಮ ಗೊಲ್ಲ, ಗಿಳಿಯಾರಿನ ಭರತ್‌ಕುಮಾರ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈಜ್ಞಾನಿಕ ಅರಿವಿನ ಕೊರತೆ ಕೃಷಿ ಕ್ಷೇತ್ರದಲ್ಲಿ ತುಂಬಾ ಇದೆ. ಈ ಬಾರಿ ತಮ್ಮ ಟ್ರಸ್ಟ್ ಕ್ಷೇತ್ರದಲ್ಲಿ 1500 ಎಕರೆ ಹಡೀಲು ಭೂಮಿಯಲ್ಲಿ ಕೃಷಿ ಮಾಡಿದ್ದು, ಇದರಲ್ಲಿ 1200 ಎಕರೆ ಪ್ರದೇಶದ ಕೃಷಿ ಯಾಂತ್ರೀಕರಣದಿಂದಲೇ ಆಗಿದೆ. ಕೃಷಿ ಬಗ್ಗೆ ಅರಿವು ಮೂಡಿಸುವ ಕೆಲಸ ವಿದ್ಯಾರ್ಥಿ ದಿೆಯಿಂದಲೇ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಚಾಂತಾರು ಗ್ರಾಪಂ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ದೊಡ್ಡೇಗೌಡ ಸಿ ಪಾಟೀಲ್, ವೀರಭದ್ರಪ್ಪ ಪೂಜಾರಿ, ಬಿ. ಶಿವರಾಮ್, ಕೆ ನಾಗರಾಜ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಶಂಕರ್ ಶೆಟ್ಟಿ ಮತ್ತು ಕೃಷಿ ಮತ್ತು ತೋಟಗಾರಿಕೆ ಶಿಕ್ಷಣ ನಿರ್ದೇಶಕ ಡಾ.ಎಂ ಹನುಮಂತಪ್ಪ, ಆಡಳಿತಾಧಿಕಾರಿ ಡಾ.ಜಿ.ಕೆ. ಗಿರಿಜೇಶ್, ಸಂಶೋಧನಾ ನಿರ್ದೇಶಕ ಡಾ.ಮೃತ್ಯುಂಜಯ ಸಿ. ವಾಲಿ, ವಿದ್ಯಾರ್ಥಿ ಕಲ್ಯಾಣದ ಡೀನ್ ಡಾ ಎನ್. ಶಿವಶಂಕರ್, ಪ್ರಗತಿಪರ ಕೃಷಿಕ ಯಡ್ತಾಡಿ ಸತೀಶ್‌ಕುಮಾರ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ಧರು.

ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ ಸ್ವಾಗತಿಸಿ, ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಶಂಕರ್ ಎಂ. ಕಾರ್ಯಕ್ರಮ ನಿರೂಪಿಸಿ, ಹಿರಿಯ ವಿಜ್ಞಾನಿ ಡಾ. ಧನಂಜಯ ಬಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News