×
Ad

ಉಡುಪಿ: ಪ್ರಯಾಣಿಕ ಕಳೆದುಕೊಂಡ ಬ್ಯಾಗ್ ಪತ್ತೆ ಹಚ್ಚಿ ಹಿಂತಿರುಗಿಸಿದ ರೈಲ್ವೆ ಪೊಲೀಸರು

Update: 2021-10-08 20:42 IST
ಸಾಂದರ್ಭಿಕ ಚಿತ್ರ

ಉಡುಪಿ, ಅ.8: ರೈಲಿನಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ 39,000ರೂ. ನಗದು ಹಾಗೂ ಅಮೂಲ್ಯ ವಸ್ತುಗಳಿದ್ದ ಬ್ಯಾಗ್‌ನ್ನು, ಅದನ್ನು ತೆಗೆದುಕೊಂಡು ಹೋಗಿದ್ದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಸಿಸಿಟಿವಿಯ ನೆರವಿನಿಂದ ಪತ್ತೆ ಹಚ್ಚಿ, ಅದನ್ನು ಕಳೆದುಕೊಂಡ ಪ್ರಯಾಣಿಕರಿಗೆ ಹಿಂದಿರುಗಿಸಿದ ಘಟನೆ ಉಡುಪಿ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಮನೋಹರ ಶೆಟ್ಟಿ ಎಂಬವರು 39ಸಾವಿರ ರೂ.ನಗದು ಹಾಗೂ ಪ್ರಮುಖ ದಾಖಲೆಗಳೂ ಸೇರಿದಂತೆ ಅಮೂಲ್ಯ ವಸ್ತುಗಳಿದ್ದ ಬ್ಯಾಗ್‌ನ್ನು ರೈಲಿನಲ್ಲೇ ಮರೆತು ತೆರಳಿದ್ದರು. ಬಳಿಕ ಅವರು ಈ ಬಗ್ಗೆ ರೈಲು ಅಧಿಕಾರಿಗಳಿಗೆ ದೂರು ನೀಡಿದ್ದರು. ಮಾಹಿತಿ ಪಡೆದ ರೈಲ್ವೆ ಕಾನ್‌ಸ್ಟೇಬಲ್ ಶ್ರೀಕಾಂತ್, ಸಿಸಿಟಿವಿಯನ್ನು ಪರಿಶೀಲಿಸಿ, ಬ್ಯಾಗ್‌ನ್ನು ಎತ್ತಿಕೊಂಡು ಹೋದ ವ್ಯಕ್ತಿಯನ್ನು ಹಾಗೂ ಆತ ಸ್ಟೇಶನ್‌ನಿಂದ ತೆರಳಿದ ಗಾಡಿಯ ನಂಬರ್‌ನ್ನು ಸಹ ಪತ್ತೆ ಹಚ್ಚಿದರು.

ರೈಲ್ವೆ ಪೊಲೀಸ್ ಸಿಬ್ಬಂದಿಗಳಾದ ಎ.ಕೆ.ಯಾದವ್ ಹಾಗೂ ಎಎಸ್‌ಐ ಸುಧೀರ್ ಶೆಟ್ಟಿ ಅವರು ಆತನ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಿ, ಮಣಿಪಾಲ ಪೊಲೀಸರ ಮೂಲಕ ಆತನ ಗುರುತು ಪತ್ತೆ ಹಚ್ಚಿ ಆತನನ್ನು ಸಂಪರ್ಕಿಸಿ ವಿಷಯವನ್ನು ತಿಳಿಸಿದರು. ಬ್ಯಾಗ್ ತೆಗೆದುಕೊಂಡು ಹೋಗಿದ್ದ ಸಂತೋಷ್ ಶೆಟ್ಟಿ ಆರ್‌ಪಿಎಫ್ ಕಚೇರಿಗೆ ಬಂದು ಬ್ಯಾಗ್‌ನ್ನು ಹಿಂದಿರುಗಿಸಿದರೆಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ಅದೇ ರೈಲಿನಲ್ಲಿ ಪ್ರಯಾಣಿಸುತಿದ್ದ ತನ್ನ ಮಗಳು ರಶ್ಮಿತಾ ಶೆಟ್ಟಿಯನ್ನು ಕರೆದೊಯ್ಯಲು ಸ್ಟೇಶನ್‌ಗೆ ಬಂದಿದ್ದ ತಾನು, ಅಲ್ಲಿದ್ದ ಕಪ್ಪು ಬ್ಯಾಗ್‌ನ್ನು ನೋಡಿ ಅದು ತನ್ನದೆಂದು ಭಾವಿಸಿ ಯಾವುದೇ ದುರುದ್ದೇಶವಿಲ್ಲದೇ ತೆಗೆದುಕೊಂಡು ಹೋಗಿದ್ದಾಗಿ ಸಂತೋಷ್ ಶೆಟ್ಟಿ ವಿವರಣೆ ನೀಡಿದರು. ಬಳಿಕ ಅವರು ನಗದು ಸೇರಿದಂತೆ ಇದ್ದ ಎಲ್ಲಾ ವಸ್ತುಗಳೊಂದಿಗೆ ಬ್ಯಾಗ್‌ನ್ನು ರೈಲ್ವೆ ಪೊಲೀಸರಿಗೆ ಹಿಂದಿರುಗಿಸಿದರು.

ಬ್ಯಾಗ್ ಸಿಕ್ಕಿದ ಮಾಹಿತಿಯನ್ನು ಪೊಲೀಸರು ಮನೋಹರ್ ಶೆಟ್ಟಿ ಅವರಿಗೆ ತಿಳಿಸಿದ್ದು, ಬ್ಯಾಗ್ ಕೊಂಡೊಯ್ದ ವ್ಯಕ್ತಿ ವಿರುದ್ಧ ತಾವು ಯಾವುದೇ ಪ್ರಕರಣ ದಾಖಲಿಸಲು ಇಚ್ಛಿಸುವುದಿಲ್ಲ ಎಂದು ಮನೋಹರ್ ಶೆಟ್ಟಿ ತಿಳಿಸಿದ್ದಲ್ಲದೇ, ಬ್ಯಾಗ್‌ನ್ನು ತರಲು ಕಿಶೋರ್ ಕುಮಾರ್ ಎಂಬವರನ್ನು ಕಳುಹಿಸಿದರು. ರೈಲ್ವೆ ಪೊಲೀಸರು ಅಗತ್ಯ ಕ್ರಮಕೈಗೊಂಡು ಬ್ಯಾಗ್‌ನ್ನು ಕಳೆದುಕೊಂಡವರಿಗೆ ಹಿಂದಿರು ಗಿಸಿದ್ದು, ಕರ್ತವ್ಯ ನಿಷ್ಠೆಯ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News