ಮಂಗಳೂರು: ದಸರಾ ಮಹೋತ್ಸವಕ್ಕೆ ಪೂಜಾರಿ ಭೇಟಿ
ಮಂಗಳೂರು, ಅ.8: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಶುಕ್ರವಾರ ಸಂಜೆ ಮಂಗಳೂರು ದಸರಾ ಮಹೋತ್ಸವಕ್ಕೆ ಭೇಟಿ ನೀಡಿದರು.
ಮಂಗಳೂರು ದಸರಾ ಮಹೋತ್ಸವದ ರೂವಾರಿ ಜನಾರ್ದನ ಪೂಜಾರಿ ಸಂಜೆ 6ಗಂಟೆ ವೇಳೆಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಕ್ಷೇತ್ರಾಡಳಿತ ಮಂಡಳಿಯವರು ಅವರನ್ನು ಬರಮಾಡಿಕೊಂಡರು. ಬಳಿಕ ಕ್ಷೇತ್ರದ ದೇವರ ದರ್ಶನ ಮಾಡಿ, ನವದುರ್ಗೆ, ಶಾರದೆ ಪ್ರತಿಷ್ಠೆಯಾಗಿರುವ ದರ್ಬಾರು ಮಂಟಪಕ್ಕೆ ತೆರಳಿದರು. ಸುಮಾರು 45 ನಿಮಿಷಗಳ ಕಾಲ ಅಲ್ಲೇ ಕುಳಿತು ಭಜನೆಯನ್ನು ವೀಕ್ಷಿಸಿದರು. ಕ್ಷೇತ್ರದ ಭೇಟಿ ನೀಡಿದವರು ಪೂಜಾರಿಯವರ ಜತೆ ಮಾತನಾಡಿ, ಶುಭ ಹಾರೈಕೆ ಪಡೆದುಕೊಂಡರು.
ಈ ಸಂದರ್ಭ ಕುದ್ರೋಳಿ ಕ್ಷೇತ್ರದ ಉಪಾಧ್ಯಕ್ಷ ರವಿಶಂಕರ್ ಮಿಜಾರು, ಕೋಶಾಧಿಕಾರಿ ಪದ್ಮರಾಜ್ ಆರ್., ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.