ಅ.29ರಂದು ಮಂಗಳೂರು ಸೌಂಡ್ಸ್ ಮತ್ತು ಲೈಟ್ಸ್ ಮಾಲಕರ ಸಂಘದಿಂದ ‘ರಂಗಿ ತರಂಗ’
ಮಂಗಳೂರು, ಅ.9: ನಗರದ ಸೌಂಡ್ಸ್ ಮತ್ತು ಲೈಟ್ಸ್ ಕಾರ್ಯನಿರ್ವಹಿಸುವ ನೌಕರರಿಗೆ ತುರ್ತು ಸಂದರ್ಭಗಳಲ್ಲಿ ನೆರವು ನೀಡುವ ನಿಟ್ಟಿನಲ್ಲಿ ಆರಂಭಿಸಲಾಗುವ ಕ್ಷೇಮನಿಧಿಗಾಗಿ ಅ.29ರಂದು ಸಂಗೀತ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ಸೌಂಡ್ಸ್ ಮತ್ತು ಲೈಟ್ಸ್ ಮಾಲಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ವಲಯ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, 2018ರ ಆಗಸ್ಟ್ 1ರಿಂದ ಆರಂಭಗೊಂಡ ಸಂಘದಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ 343 ಮಾಲಕರು ಸೇರ್ಪಡೆಯಾಗಿದ್ದು, ಸುಮಾರು 2,000 ಅಧಿಕ ಮಂದಿ ಇವರ ಜತೆ ದುಡಿಯುತ್ತಿದ್ದಾರೆ ಎಂದರು.
ಮಂಗಳೂರು ತಾಲೂಕಿನಲ್ಲಿ ಸಂಘವು ಮಂಗಳೂರು ನಗರ, ಮಂಗಳೂರು ಉಳ್ಳಾಲ, ಮಂಗಳೂರು ಸುರತ್ಕಲ್, ಮಂಗಳೂರು ಕಾವೂರು ಹಾಗೂ ಮಂಗಳೂರು ವಾಮಂಜೂರು ಎಂಬ ಐದು ವಲಯಗಳಾಗಿ ವಿಭಾಗಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಂಘದ ನೇತೃತ್ವದಲ್ಲಿ ನಮ್ಮ ತಂಡ ಹಾಗೂ ಕುಟುಂಬ ಸದಸ್ಯರಿಗೆ ಕೋವಿಡ್ 19 ನಿಯಂತ್ರಣ ಲಸಿಕೆಯನ್ನು ನೀಡಲಾಗಿದೆ. ಇದೀಗ ಉದ್ಯೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಕ್ಷೇಮ ನಿಧಿ ಆರಂಭಿಸಲು ರಂಗಿ ತರಂಗ ಎಂಬ ಚಾರಿಟಿ ಶೋ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಮತ್ತು ಅವರ ತಂಡದ ಜತೆಗೆ ಇತರ ಹಲವು ಪ್ರಖ್ಯಾತ ಸಂಗೀತ ಗಾಯಕರು ಭಾಗವಹಿಸಲಿದ್ದಾರೆ. ನಗರದ ಪುರಭವನದಲ್ಲಿ ಅಂದು ಸಂಜೆ 5ರಿಂದ ಆಹ್ವಾನಿತ ಸಾರ್ವಜನಿಕರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ದಾಯ್ಜಿವಲ್ಡ್‌ನ ಫೇಸ್‌ಬುಕ್ ಪೇಜ್‌ನಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ವಲಯಗಳ ಪದಾಧಿಕಾರಿಗಳಾದ ನಿತ್ಯಾನಂದ, ದಾಮೋದರ ಭಾಗವತ್, ಶ್ಯಾಂ ಉಪಸ್ಥಿತರಿದ್ದರು.