ಉಡುಪಿ : ಇ-ಕೆವೈಸಿ ಮಾಡಲು ಇನ್ನೊಂದು ಅವಕಾಶ
ಉಡುಪಿ, ಅ.9: ಉಡುಪಿ ಜಿಲ್ಲೆಯಲ್ಲಿ ಈವರೆಗೆ ಇ-ಕೆವೈಸಿ ಆಗದೇ ಇರುವ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಲು ಇನ್ನೊಂದು ಅವಕಾಶ ಕಲ್ಪಿಸಲಾಗಿದೆ. ಇದು ಕೊನೆಯ ಅವಕಾಶವಾಗಿರುವುದರಿಂದ ಈವರೆಗೆ ಇ-ಕೆವೈಸಿ ಆಗದೇ ಇರುವ ಪಡಿತರ ಚೀಟಿಯ ಸದಸ್ಯರು ಅ.31ರೊಳಗೆ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ತಮ್ಮ ಬೆರಳಚ್ಚು ನೊಂದಾಯಿಸಿ (ಆಧಾರ್ ಧೃಢೀಕರಣ ಇ-ಕೆವೈಸಿ) ಕೊಳ್ಳುವಂತೆ ಸೂಚಿಸಲಾಗಿದೆ.
ಪರಿಶಿಷ್ಟ ಪಂಗಡ ಮಔತ್ತು ಪರಿಶಿಷ್ಟ ಜಾತಿಗೆ ಸೇರಿದ ಪಡಿತರ ಚೀಟಿದಾರರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಹಾಗೂ ಅನಿಲ ಸಂಪರ್ಕ ಹೊಂದಿರುವ ಪಡಿತರ ಚೀಟಿದಾರರು ತಮ್ಮ ಅನಿಲ ಸಂಪರ್ಕದ ಮಾಹಿತಿಯನ್ನು ಹಾಗೂ ತಮ್ಮ ಮೊಬೈಲ್ ದೂರವಾಣಿ ಸಂಖ್ಯೆ ಮಾಹಿತಿಯನ್ನು ಇ-ಕೆವೈಸಿ ಮಾಡಲು ನ್ಯಾಯಬೆಲೆ ಅಂಗಡಿಗೆ ಬರುವಾಗ ಕಡ್ಡಾಯವಾಗಿ ತರಬೇಕು.
ಇದು ಅಂತಿಮ ಅವಕಾಶವಾಗಿದ್ದು, ಇ-ಕೆವೈಸಿ ಮಾಡದೇ ಇರುವ ಪಡಿತರ ಚೀಟಿಯ ಸದಸ್ಯರಿಗೆ ಮುಂಬರುವ ತಿಂಗಳಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತ ಗೊಳಿಸಲು ಕ್ರಮವಹಿಸಲಾಗುವುದು. ಉಡುಪಿ ಜಿಲ್ಲೆಯಲ್ಲಿ ಪೋರ್ಟಿಬಿಲಿಟಿ ಮೂಲಕ ಇತರ ಜಿಲ್ಲೆಗಳ ಪಡಿತರ ಚೀಟಿದಾರರು ಪಡಿತರ ಪಡೆಯುತಿದ್ದಲ್ಲಿ ಅವರಿಗೆ ಹಂಚಿಕೆಯಾದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿದಲ್ಲಿ ಮಾತ್ರ ಉಡುಪಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲಿಲ ಪಡಿತರ ಆಹಾರ ಧಾನ್ಯ ವಿತರಿಸಲಾಗುವುದು ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಇಲಾಖೆಯ ಪ್ರಭಾರ ಉಪನಿರ್ದೇಶಕ ಮೊಹಮ್ಮದ್ ಇಸಾಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.