ನಡುಗುಡ್ಡೆ ಸರಕಾರಿ ಪ್ರಾಥಮಿಕ ಶಾಲೆ ಗುರುಪುರ ಪ್ರೌಢಶಾಲೆಗೆ ಸ್ಥಳಾಂತರಿಸಲು ನಿರ್ಧಾರ
ಮಂಗಳೂರು, ಅ.9: ವಿದ್ಯಾರ್ಥಿಗಳ ಕೊರತೆಯಿಂದಾಗಿ ಕೆಲವು ವರ್ಷದ ಹಿಂದೆ ಮುಚ್ಚಲ್ಪಟ್ಟಿದ್ದ ಗುರುಪುರ ಸಮೀಪದ ನಡು ಗುಡ್ಡೆಯ ಸರಕಾರಿ ಕಿ.ಪ್ರಾ.ಶಾಲೆಯನ್ನು ಗುರುಪುರ ಪ್ರೌಢಶಾಲೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಶಿಕ್ಷಣ ಇಲಾಖೆಯ ಆದೇಶದಂತೆ ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣಾಧಿಕಾರಿಯ (ಡಿಡಿಪಿಐ) ಸೂಚನೆಯಂತೆ ಇತ್ತೀಚೆಗೆ ಗುರುಪುರ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಣಾಸಕ್ತರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನವಂಬರ್ ಒಂದರಿಂದಲೇ ಪ್ರೌಢಶಾಲೆಯ ಖಾಲಿ ಕೊಠಡಿಗಳಲ್ಲಿ 1ರಿಂದ 5ನೇ ತರಗತಿ ಆರಂಭಿಸುವ ನಿಟ್ಟಿನಲ್ಲಿ ಸುಮಾರು 15 ಮಕ್ಕಳ ಪೋಷಕರ ಒಪ್ಪಿಗೆ ಪತ್ರ ಸಂಗ್ರಹಿಸಿ ಡಿಡಿಪಿಐಗೆ ಕಳುಹಿಸಿ ಕೊಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮೊದಲ ಹಂತದಲ್ಲಿ ಕಿ.ಪ್ರಾ.ಶಾಲೆಯ ಒಂದು ಮತ್ತು ಐದನೇ ತರಗತಿಗೆ ಮಕ್ಕಳ ಪ್ರವೇಶಾತಿ ಪಡೆಯುವ ಉದ್ದೇಶಕ್ಕಾಗಿ ಮನೆಮನೆಗಳಿಗೆ ತೆರಳಿ ಮಕ್ಕಳ ಪೋಷಕರೊಂದಿಗೆ ಚರ್ಚಿಸಿ ಮನವೊಲಿಸಲು ಹಾಗೂ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚಿಸುವ ನಿಟ್ಟಿನಲ್ಲಿ ಶಿಕ್ಷಕಿ ಸುಲತಾ, ವಾರ್ಡಿನ ಗ್ರಾಪಂ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ತಂಡ ರಚಿಸಲು ಹಾಗೂ ತರಗತಿ ಕೊಠಡಿಗಳಿಗೆ ಬೆಂಚು, ಕುರ್ಚಿಗಳಿಗಾಗಿ ದಾನಿಗಳ ನೆರವು ಪಡೆಯಲು ಹಾಗೂ ಹಳೆಯ ಶಾಲೆಯಲ್ಲಿರುವ ಪೀಠೋಪಕರಣ ಬಳಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಪ್ರೌಢ ಶಾಲಾಭಿವೃದ್ಧಿ ಸಮತಿ ಅಧ್ಯಕ್ಷ ಸತೀಶ್ ಕಾವ, ಸರಕಾರಿ ಪಿಯು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶವಂತ ಆಳ್ವ, ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ, ಗುರುಪುರ ಗ್ರಾಪಂ ಅಧ್ಯಕ್ಷ ಯಶವಂತ ಶೆಟ್ಟಿ, ಸದಸ್ಯರಾದ ಜಿಎಂ ಉದಯ ಭಟ್, ಸಚಿನ್ ಅಡಪ, ರಾಜೇಶ್ ಸುವರ್ಣ, ಬಾಲಕೃಷ್ಣ ಪೂಜಾರಿ, ಸ್ಥಳೀಯರಾದ ಶ್ರೀಕರ ಶೆಟ್ಟಿ, ಸೋಮಯ್ಯ ಬೆಳ್ಳೂರು, ವಿಷ್ಣು ಕಾಮತ್, ವಿನಯ್, ಲಕ್ಷ್ಮಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ರೂಪಾ ಡಿ. ಸ್ವಾಗತಿಸಿ, ವಂದಿಸಿದರು.