ಮತಾಂತರ ತಡೆಯಲು ಶೀಘ್ರವೇ ಮಸೂದೆ : ಗೃಹ ಸಚಿವ ಅರಗ ಜ್ಞಾನೇಂದ್ರ
ಉಡುಪಿ, ಅ. 9: ರಾಜ್ಯದಲ್ಲಿ ಮತಾಂತರ ಸಂಭವಿಸುತ್ತಿರುವ ವೇಗ ನೋಡಿದರೆ, ದೊಡ್ಡ ಕ್ಷೋಭೆ ನಿರ್ಮಾಣದ ಎಲ್ಲಾ ಲಕ್ಷಣಗಳಿವೆ. ಇದನ್ನು ತಡೆಗಟ್ಟುವ ಅಗತ್ಯವಿದೆ. ಎಲ್ಲಾ ಧರ್ಮದವರು ಅವರವರ ಧರ್ಮದಲ್ಲಿ ಚೆನ್ನಾಗಿರಬೇಕೆಂಬುದು ಸರಕಾರದ ಆಶಯವಾಗಿದೆ. ಹೀಗಾಗಿ ಇದನ್ನು ತಡೆಯಲು ಶೀಘ್ರವೇ ಮತಾಂತರ ತಡೆ ಮಸೂದೆ ತರಲಿದ್ದೇವೆ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇನ್ನೊಂದು ಧರ್ಮದವರನ್ನು ಮತಾಂತರ ಮಾಡುವುದರಿಂದ ಕುಟುಂಬದೊಳಗೆ ಕಲಹ ಸೃಷ್ಟಿಯಾಗುತ್ತಿವೆ. ಹೀಗಾಗಿ ಈ ಬಗ್ಗೆ ಸರಕಾರ ವಿಶೇಷ ಗಮನ ಕೊಡುತ್ತಿದೆ. ಅದರ ಬಗ್ಗೆ ವಿಶೇಷ ಕಾಯ್ದೆಯನ್ನು ತರುತ್ತಿದೆ ಎಂದರು.
ಗೋಹತ್ಯೆ ತಡೆಗೆ ಈಗಿರುವ ಕಾಯಿದೆ ಸಾಕು, ಅಧಿಕಾರಿಗಳಿಗೆ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ಕಾಯ್ದೆ ವಿಫಲವಾಗಿಲ್ಲ. ವಿಫಲವಾಗಲು ಪೊಲೀಸರು ಬಿಡಬಾರದು ಎಂದರು. ಇಂಟೆಲಿಜೆನ್ಸ್ ಬಲವರ್ಧನೆ ಅಗತ್ಯವಿದ್ದು ವಿದೇಶದಲ್ಲಿ ಕುಳಿತು ಭಯೋತ್ಪಾದನೆ, ಅರಾಜಕತೆಯ ಸೃಷ್ಟಿಯ ಷಡ್ಯಂತ್ರ ಪತ್ತೆ, ಸ್ಯಾಟಲೈಟ್ ಫೋನ್ ಬಳಕೆ ತಡೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಮಂಗಳೂರಿನಲ್ಲಿ ಕೆಲವು ಕಾಲೇಜು ಹಾಗೂ ಸಂಸ್ಥೆಗಳಿಗೆ ಬಹಿರಂಗ ಬೆದರಿಕೆ ಒಡುತ್ತಿರುವ ಕೆಲ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪತ್ರ ಬರೆದಿರುವ ಕುರಿತು ಪ್ರಶ್ನಿಸಿದಾಗ, ಅದರಲ್ಲಿ ಹುರುಳಿದ್ದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಸುಮ್ಮಸುಮ್ಮನೆ ಆರೋಪಿಸಿದರೆ ಕೈಬಿಡುತ್ತಾರೆ. ಕಾನೂನನ್ನು ಯಾರು ಕೈಗೆ ತೆಗೆದುಕೊಂಡರೂ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದರು.
ಓಟ್ ಬ್ಯಾಂಕಿಗೆ ಜೊಲ್ಲು ಸುರಿಸುವವರು: ಒಂದು ವರ್ಗದ ಓಟ್ ಬ್ಯಾಂಕಿಗೆ ಜೊಲ್ಲು ಸುರಿಸಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಆರೆಸ್ಸೆಸ್‌ನ್ನು ಟೀಕಿಸುತಿದ್ದಾರೆ. ಆರೆಸ್ಸೆಸ್ ಎಷ್ಟು ಒಳ್ಳೆಯದು ಎಂದು ಇಬ್ಬರಿಗೂ ಗೊತ್ತಿದೆ ಎಂದು ಅರಗ ಜ್ಞಾನೇಂದ್ರ ಕಟಕಿಯಾಡಿದರು.
ಆರೆಸ್ಸೆಸ್ ಏನು ಮಾಡಿದೆ ಹೇಳಿ. ನಾನು ಆರೆಸ್ಸೆಸ್. ಈ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿ ಎಲ್ಲರೂ ಆರೆಸ್ಸೆಸ್‌ನಿಂದ ಬಂದವರು. ನಾವೆಲ್ಲ ಏನು ತೊಂದರೆ ಮಾಡಿದ್ದೀವಿ. ನಮ್ಮನ್ನು ಜನ ಆಯ್ಕೆ ಮಾಡಿಲ್ವ ಎಂದು ಪ್ರಶ್ನಿಸಿದ ಅವರು, ದೇಶಭಕ್ತಿಯ ಪಾಠ ಹೇಳಿಕೊಡುವ ದೇಶದ ಬಹಳ ದೊಡ್ಡ ಸಂಘಟನೆ ಆರೆಸ್ಸೆಸ್ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಆರೆಸ್ಸೆಸ್ ಮೇಲೆ ಟೀಕೆ ಮಾಡುವ ಹಿನ್ನೆಲೆ ಇಷ್ಟೇನೆ. ಒಂದು ಓಟ್ ಬ್ಯಾಂಕ್‌ನ್ನು ಕಿತ್ತುಕೊಳ್ಳುವ ಬಗ್ಗೆ ಇಬ್ಬರ ನಡುವೆ ನಡೆದಿರುವ ಸ್ಪರ್ಧೆ ಅಷ್ಟೇ ಎಂದರು.