ಆರೆಸ್ಸೆಸ್ ಸಮಾಜ, ರಾಷ್ಟ್ರ ಕಟ್ಟುವ ಸಂಘಟನೆ : ಸಚಿವ ಅರಗ ಜ್ಞಾನೇಂದ್ರ
ಉಡುಪಿ, ಅ. 9: ಆರೆಸ್ಸೆಸ್ ಸಮಾಜ, ದೇಶದ ಒಳಿತು ಬಯಸುವ, ರಾಷ್ಟ್ರ ಕಟ್ಟುವ ಶಕ್ತಿಶಾಲಿ ಸಂಘಟನೆ. ಸಂಘ, ಪಕ್ಷ ತುಂಬಿದ ಸಂಸ್ಕಾರ ಜನಸಾಮಾನ್ಯರೂ ಒಪ್ಪುವ ಸಾರ್ವಕಾಲಿಕ ಸಿದ್ಧಾಂತವಾಗಿದ್ದು ಇದರಿಂದಾಗಿಯೇ ನಾವು ಈ ಹಂತದವರೆಗೆ ಬಂದಿದ್ದೇವೆ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಆರೆಸ್ಸೆಸ್‌ನ್ನು ಸಮರ್ಥಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಭೇಟಿಯ ಸಂದರ್ಭದಲ್ಲಿ ಇಂದು ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿ, ಪಕ್ಷದ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆರೆಸ್ಸೆಸ್ ವಿರುದ್ಧ ಕೆಲದಿನಗಳಿಂದ ಕೇಳಿಬರುತ್ತಿರುವ ಟೀಕೆಗಳಿಗೆ ತಮ್ಮ ಭಾಷಣದ ವೇಳೆ ಉತ್ತರಿಸಿದರು.
ಈ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಮಾತ್ರವಲ್ಲ ರಾಜ್ಯ ಗೃಹ ಸಚಿವನಾದ ನಾನು ಸಹ ಆರೆಸ್ಸೆಸ್‌ನವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಆರೆಸ್ಸೆಸ್ ಬಗ್ಗೆ ಟೀಕೆ ಮಾಡಲು ನೀವ್ಯಾರು ಎಂದು ಟೀಕಾಕಾರರನ್ನು ಪ್ರಶ್ನಿಸಿದರು. ಶಾಂತಿ, ಸೌಹಾರ್ದತೆಯಿಂದ ಪರಸ್ಪರರು ಬದುಕಿ ದೇಶ ಕಟ್ಟೊ ಸಿದ್ಧಾಂತ ನಮ್ಮದಾಗಿದೆ ಎಂದರು.
ಸಂಘ ತುಂಬಿದ ಸಂಸ್ಕಾರದಿಂದ ಯಾವುದೇ ಸ್ಥಾನವನ್ನು ನೀಡಿದರೂ ನಾನು ಯಶಸ್ವಿಯಾಗಿ ನಿಭಾಯಿಸುತ್ತೇನೆ. ಈ ಸಿದ್ಧಾಂತ ವನ್ನು ಜನಸಾಮಾನ್ಯರು ಒಪ್ಪುವಂತಹದು. ಪಕ್ಷ ಹಾಗೂ ವ್ಯಕ್ತಿ ನಡುವೆ ಆಯ್ಕೆಯಲ್ಲಿ ಪಕ್ಷ ಮೊದಲು. ದೇಶ ಹಾಗೂ ಪಕ್ಷದ ನಡುವೆ ಆಯ್ಕೆ ಬಂದಾಗ ದೇಶವೇ ಮೊದಲ ಆದ್ಯತೆ ಎಂದರು.
ಹೊಡೆದ ಕೈಗಳಿಂದ ಸೆಲ್ಯೂಟ್: ಹೋರಾಟದಿಂದಲೇ ಬೆಳೆದು ಬಂದ ನಾನು ಕೆಲ ಕಾಲ ಜೈಲಿನಲ್ಲಿ ಕೈದಿಯಾಗಿದ್ದೆ. ಪೊಲೀಸರ ಜೊತೆ ಸಾಕಷ್ಟು ಕುಸ್ತಿ ಮಾಡಿದ್ದೇನೆ. ಅಂದು ಬೆನ್ನು ಮೂಳೆ ಮುರಿಯುವ ಹಾಗೆ ಲಾಠಿಯಿಂದ ಹೊಡೆದ ಕೈಗಳೇ ಇಂದು ನನಗೆ ಸೆಲ್ಯೂಟ್ ಹೊಡೆಯುತ್ತಿವೆ. ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಇರುವುದು ಇದರಲ್ಲೇ ಎಂದು ಅರಗ ಹೇಳಿದರು.
ರಾಜ್ಯದಲ್ಲಿ ಖಾಲಿಯಿರುವ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾ ಗುತ್ತಿದೆ. 4000 ಪೊಲೀಸ್ ಹಾಗೂ 500 ಎಸ್‌ಐ ಹುದ್ದೆಗಳನ್ನು ತುಂಬಲಾಗುತ್ತಿದೆ. ಇದರಿಂದ 12,000 ಪೊಲೀಸ್ ಸಿಬ್ಬಂದಿ ಹುದ್ದೆ ಬಾಕಿ ಉಳಿಯುತ್ತದೆ. ಈ ಹಿಂದೆ ಖಾಲಿಯಿದ್ದ 20,000 ಪೊಲೀಸ್ ಹುದ್ದೆಯಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಹುದ್ದೆಗಳು ಭರ್ತಿಯಾಗಿವೆ ಎಂದರು.
ಪೊಲೀಸ್ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಹಿಂದೆ ಗೃಹ ಸಚಿವರಾಗಿದ್ದ ಡಾ ವಿ.ಎಸ್. ಆಚಾರ್ಯ. ವ್ಯಕ್ತಿಯ ಪ್ರತಿಭೆ ಆಧಾರದಲ್ಲಿ ನೇಮಕದ ಪಾರದರ್ಶಕ ವ್ಯವಸ್ಥೆಯನ್ನು ಗೃಹ ಇಲಾಖೆಯಲ್ಲಿ ತಂದಿದ್ದಾರೆ. ಅದನ್ನು ಮೀರಿ ನೇಮಕಾತಿ ನಡೆಸಲು ಸಾಧ್ಯವಿಲ್ಲ. ದೇಶದಲ್ಲಿ ರಾಜ್ಯದ ಪೊಲೀಸರಿಗೆ ಒಳ್ಳೆಯ ಹೆಸರಿದೆ. ಕರಾವಳಿಯಲ್ಲಿ ಚಿಗುರುತ್ತಿರುವ ಭಯೋತ್ಪಾದನೆಯನ್ನು ಚಿವುಟಿ ಹಾಕಬೇಕು ಎಂದರು.
ಪಕ್ಷದ ಹಿರಿಯರು ಮುಂದೆ ಬರಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಬಾರಿ ಮಂತ್ರಿ ಮಂಡಲವನ್ನು ರಚಿಸಿ ದ್ದಾರೆ. ಜನರು ಆಯ್ಕೆ ಮಾಡಿರುವ ಜನಪ್ರತಿನಿಧಿಗಳು ಉತ್ತಮವಾಗಿ ಕೆಲಸ ಮಾಡಿದಾಗ ಮಾತ್ರ ಕಾರ್ಯಕರ್ತರು ಸರಕಾರದ ಯೋಜನೆ, ಸಾಧನೆಗಳನ್ನು ಜನರ ಮನಸ್ಸು, ಹೃದಯಕ್ಕೆ ತಲುಪಿಸುವ ಕೆಲಸವನ್ನು ಮಾಡಲು ಸಾಧ್ಯ ಎಂದು ಗೃಹ ಸಚಿವರು ನುಡಿದರು.
ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿದರು.