ಸುಳ್ಯ : ಮತ್ತೆ ಕಾಡಾನೆ ಹಾವಳಿ, ಕೃಷಿ ನಾಶ

Update: 2021-10-09 15:34 GMT

ಸುಳ್ಯ : ತಾಲೂಕಿನ ಮಂಡೆಕೋಲು ಸೇರಿದಂತೆ ಗಡಿ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ.

ಕಳೆದ ಕೆಲವು ದಿನಗಳಿಂದ ಮಂಡೆಕೋಲು ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಮಂಡೆಕೋಲು ದೇವಸ್ಥಾನದ ಸಮೀಪದ ಕೃಷಿಕರ ತೋಟಕ್ಕೆ ನುಗ್ಗಿ ಕೃಷಿ ನಾಶಪಡಿಸಿದೆ. ತೆಂಗು, ಬಾಳೆ, ಅಡಿಕೆ ಮರ ಮತ್ತಿತರ ಕೃಷಿಗಳನ್ನು ನಾಶಪಡಿಸಿದೆ.

ಕಳೆದ ಕೆಲವು ದಿನಗಳಿಂದ ಮಂಡೆಕೋಲು ಗ್ರಾಮದ ವಿವಿಧ ಭಾಗಗಳಲ್ಲಿ ಸುತ್ತಾಡುತ್ತಿರುವ ಕಾಡಾನೆಗಳ ಹಿಂಡು ಕೇನಾಜೆ ಮತ್ತಿತರ ಭಾಗಗಳಲ್ಲಿ  ಕೃಷಿಗೆ ಹಾನಿ ಮಾಡಿದೆ ಎಂದು ಕೃಷಿಕರು ಹೇಳುತ್ತಾರೆ.

ಮಂಡೆಕೋಲಿನಲ್ಲಿ ಕಾಡಾನೆ ಹಾವಳಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸೂಕ್ತ ಪರಿಹಾರ ನೀಡಬೇಕು ಎಂದು ಮಂಡೆಕೋಲಿನ ಕೃಷಿಕರಾದ ರವಿಚಂದ್ರ ಕಡಂಬಳಿತ್ತಾಯ ಮತ್ತು ರಾಮ್ ಕುಮಾರ್ ಹೆಬ್ಬಾರ್ ಅವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಮಂಡೆಕೋಲು ಗ್ರಾಮ ನಿರಂತರ ಕಾಡಾನೆ ದಾಳಿಗೆ ತುತ್ತಾಗಿದೆ. ಕೋಟ್ಯಾಂತರ ರೂಗಳ ನಷ್ಟ ಉಂಟಾಗಿದೆ. ಜನರು ಯಾವಾಗಲೂ ಭೀತಿಯಿಂದಲೇ ಕಾಲ ಕಳೆಯಬೇಕಾಗಿ ಬಂದಿದೆ. ಆನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು, ಕೃಷಿಕರಿಗೆ ನೆಮ್ಮದಿಯ ಬದುಕು ದೊರೆಯುಂತಾಗಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News