×
Ad

ಫೋನ್ ಕದ್ದಾಲಿಕೆ, ಮಾಹಿತಿ ಸೋರಿಕೆ ಪ್ರಕರಣ:ಸಿಬಿಐ ಮುಖ್ಯಸ್ಥರಿಗೆ ಮುಂಬೈ ಪೊಲೀಸರು ಸಮನ್ಸ್

Update: 2021-10-09 21:10 IST

ಮುಂಬೈ: ಪೊಲೀಸ್ ವರ್ಗಾವಣೆ ಹಾಗೂ  ಪೋಸ್ಟಿಂಗ್ ಗಳಿಗೆ ಕುರಿತಾದ ಮಹಾರಾಷ್ಟ್ರ ಗುಪ್ತಚರ ಇಲಾಖೆಯ ಮಾಹಿತಿಯ ಸೋರಿಕೆ ಹಾಗೂ ಫೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ ಸಿಬಿಐ ಮುಖ್ಯಸ್ಥ ಸುಬೋಧ್ ಕುಮಾರ್ ಜೈಸ್ವಾಲ್ ಅವರಿಗೆ ಮುಂಬೈ ಪೊಲೀಸರ ಸೈಬರ್ ಸೆಲ್ ನಿಂದ ಸಮನ್ಸ್ ಜಾರಿಗೊಳಿಸಲಾಗಿದ್ದು, ಈ ಪ್ರಕರಣ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು ಹಾಗೂ ಈ ಬಗ್ಗೆ ಬಾಂಬೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.

ಸಮನ್ಸ್ ಅನ್ನು ಇ-ಮೇಲ್ ಮೂಲಕ ಕಳುಹಿಸಲಾಗಿದ್ದು, ಮುಂದಿನ ಗುರುವಾರ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರ ಕೇಡರ್‌ನ 1985 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಜೈಸ್ವಾಲ್ ಅವರನ್ನು ಈ ವರ್ಷದ ಮೇನಲ್ಲಿ ಎರಡು ವರ್ಷಗಳ ಅವಧಿಗೆ ಕೇಂದ್ರ ತನಿಖಾ ದಳದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

ಜೈಸ್ವಾಲ್ ಅವರು ಮುಂಬಯಿ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದರು ಮತ್ತು ತರುವಾಯ ಮಹಾರಾಷ್ಟ್ರದ ಪೋಲಿಸ್ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು.

ಈ ಪ್ರಕರಣವು ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರು ಮಹಾರಾಷ್ಟ್ರದಲ್ಲಿ ಪೊಲೀಸ್ ವರ್ಗಾವಣೆಯಲ್ಲಿ ಭ್ರಷ್ಟಾಚಾರದ ಆರೋಪದ ಬಗ್ಗೆ ಸಿದ್ಧಪಡಿಸಿದ ವರದಿಯ 'ಸೋರಿಕೆ'ಗೆ ಸಂಬಂಧಿಸಿದೆ. ತನಿಖೆಯ ವೇಳೆ ಹಿರಿಯ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಫೋನ್ ಅನ್ನು ಅಕ್ರಮವಾಗಿ ಕದ್ದಾಲಿಸಲಾಗಿದೆ ಎಂದು ಆರೋಪಿಸಲಾಗಿದೆ. ವರದಿಯನ್ನು ಉದ್ಧೇಶಪೂರ್ವಕವಾಗಿ ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಸೈಬರ್ ಸೆಲ್ ಈ ಕುರಿತು ಎಫ್ ಐಆರ್ ದಾಖಲಿಸಿದ್ದು, ಶುಕ್ಲಾ ಇಲ್ಲವೇ ಇತರ ಯಾವುದೇ ಅಧಿಕಾರಿಯನ್ನು ಹೆಸರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News