ಅನೈತಿಕ ಗೂಂಡಾಗಿರಿಯ ಹಿಂದೆ ಸಂಸದ ನಳಿನ್ ಕುಮಾರ್ , ಶಾಸಕ ಭರತ್ ಶೆಟ್ಟಿ ಕೈವಾಡ: ಮುನೀರ್ ಕಾಟಿಪಳ್ಳ ಆರೋಪ

Update: 2021-10-09 15:51 GMT

ಮಂಗಳೂರು : ದ.ಕ ಜಿಲ್ಲೆಯಲ್ಲಿ ಧರ್ಮ, ದೇವರ ಹೆಸರಲ್ಲಿ ಬಿಜೆಪಿ ಸಂಘಪಾರಿವಾರ ದಿನನಿತ್ಯ ನಡೆಸುವ ಅನೈತಿಕ ಗೂಂಡಾಗಿರಿ ಇದು ಚುನಾವಣಾ ಮುನ್ನಲೆಯ ತಯಾರಿ. ಈ ಅನೈತಿಕ ಗೂಂಡಾಗಿರಿಯ ಹಿಂದೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಕೈವಾಡವಿದೆ ಎಂದು ಡಿವೈಎಫ್ಐ ರಾಜ್ಯಾದ್ಯಕ್ಷರಾದ ಮುನೀರ್ ಕಾಟಿಪಳ್ಳ ಆರೋಪಿಸಿದರು.

ಕರಾವಳಿಯಲ್ಲಿ ಹೆಚ್ಚುತ್ತಿರುವ ಅನೈತಿಕ ಪೊಲೀಸ್‌ಗಿರಿ ತಡೆಗೆ, ಅಮಾಯಕರ ಮೇಲೆ ಹಲ್ಲೆಗೈಯುವ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ, ಬಿಜೆಪಿ-ಸಂಘಪರಿವಾರದ ಕೋಮು ಪ್ರಚೋದಕ ಕಾರ್ಯಕ್ರಮ ಖಂಡಿಸಿ ನಗರದ ಕ್ಲಾಕ್‌ ಟವರ್ ಎದುರು ಶನಿವಾರ ಸಂಜೆ ಹಮ್ಮಿಕೊಳ್ಳಲಾದ ಪ್ರತಿಭಟನಾ ಪ್ರದರ್ಶನದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಅವರೇ ಚಿತ್ರಿಸಿ ಕೊಟ್ಟ ಬರಹವೇ ಈ ಸುರತ್ಕಲ್‌ನಲ್ಲಿ ನಡೆದ ಘಟನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಜಾತ್ಯತೀತ ಹಿರಿಯ ರಾಜಕಾರಣಿಯನ್ನು ಗುರುಯಾಗಿಸಿ, ಅವರ ಮನೆಯ ಹೆಣ್ಮಕ್ಕಳನ್ನು ಎಳೆದು ತಂದು ಮಾನ ಹರಾಜು ಹಾಕುವಂತಹ ಕುಕೃತ್ಯ ನಡೆಯುತ್ತಿವೆ. ಆದರೆ ಪೊಲೀಸರು ಮೂಖಪ್ರೇಕ್ಷಕರಾಗಿ, ಯಾವುದೇ ಅಡ್ಡಿಪಡಿಸದೆ, ಕೇಸು ದಾಖಲಿಸದೇ ಮೌನ ವಹಿಸುವುದಾದರೆ ಇದರ ಹಿಂದೆ ಸ್ಥಳೀಯವಾಗಿ ಬಿಜೆಪಿ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಜಿಲ್ಲೆಯ ಬಿಜೆಪಿ ಶಾಸಕರು, ಇಡೀ ಆಡಳಿತ ಪಕ್ಷದ ಕೈವಾಡ ಇದೆ ಎನ್ನಲು ಯಾವುದೇ ರಾಜಕೀಯ ಪಾಂಡಿತ್ಯದ ಅಗತ್ಯವಿಲ್ಲ ಎಂದು ಹೇಳಿದರು.

ತುಳುನಾಡಿನ ಬೀದಿಗಳಲ್ಲಿ ಪುಂಡ-ಪೋಕರಿಗಳು ಗುಂಪು ಕಟ್ಟಿಕೊಂಡು ಜೋಡಿಗಳು, ವಿದ್ಯಾರ್ಥಿಗಳ ತಂಡಗಳಿದ್ದರೆ ಅವುಗಳಲ್ಲಿ ಭಿನ್ನ ಧರ್ಮದವರಿರುವುದನ್ನು ಪಟ್ಟಿ ಮಾಡುತ್ತಾರೆ. ಅಲ್ಲಿ ಭಿನ್ನ ಧರ್ಮದವರಿದ್ದರೆ ಅವರನ್ನು ಸಾರ್ವಜನಿಕವಾಗಿ ಹಲ್ಲೆ ಮಾಡಿ, ಅವರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಪೊಲೀಸರಿಗೆ ಒಪ್ಪಿಸುವಂತಹ ಘಟನೆಗಳು ಸತತವಾಗಿ ವರದಿಯಾಗುತ್ತಿವೆ. ಇದು ಆತಂಕಕಾರಿ ವಿದ್ಯಮಾನವಾಗಿದೆ ಎಂದರು.

ಧರ್ಮದ ಬಾವುಟವನ್ನು ಹಿಡಿದು, ತಾವು ಹೇಳಿದ್ದೇ ಸರಿ, ಗೆರೆ ಹಾಕಿದ್ದನ್ನು ದಾಟುವಂತಿಲ್ಲ. ದಾಟಿದರೆ ಸಾರ್ವಜನಿಕವಾಗಿ ಹಲ್ಲೆ, ಮೊಕದ್ದಮೆ ದಾಖಲಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಪುಂಡ-ಪೋಕರಿಗಳು ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ ಎನ್ನುವುದಾದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.

ಸಂಘಪರಿವಾರದವರು ಕೃತ್ಯ ಎಸಗುತ್ತಿರುವುದು ಹೊಸದೇನಲ್ಲ. ಇದೇ ಸೀಸನ್‌ನ ಆರಂಭದಲ್ಲಿ ಪುತ್ತೂರು, ಕಡಬ, ಮಾಣಿ, ಮಂಗಳೂರು, ಸುರತ್ಕಲ್, ಗಂಗೊಳ್ಳಿಯ ಉದ್ದಕ್ಕೂ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಸಾಗಿವೆ. ಸುರತ್ಕಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯರ ಮೇಲೆ ನಡೆದ ವಿದ್ಯಮಾನಗಳನ್ನು ಗಮಿಸಿದರೆ ಇದರ ಹಿಂದೆ ಯಾರಿದ್ದಾರೆ? ಏನು ಉದ್ದೇಶವೇನು? ಎಂಬುದು ಜನರಿಗೆ ಗೊತ್ತಿದೆ. ವಿದ್ಯಾರ್ಥಿಗಳ ಮೇಲಿನ ಹಲ್ಲೆ, ಅದನ್ನು ತಡೆಯಲು ಬಂದ ಪೊಲೀಸ್ ಅಧಿಕಾರಿಯ ಮೇಲೆಯೂ ಹಲ್ಲೆಗೆ ಯತ್ನಿಸಿರುವುದು ರಾಜ್ಯಾದ್ಯಂತ ಖಂಡನೆ ವ್ಯಕ್ತವಾದರೂ ಸಾಮಾನ್ಯ ಸೆಕ್ಷನ್ ಹಾಕಿ, ರಾಜ ಮರ್ಯಾದೆಯಿಂದ ಮನೆಗೆ ಕಳಿಸುವ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸುರತ್ಕಲ್‌ನಲ್ಲಿ ವಿದ್ಯಾರ್ಥಿನಿಯ ಮೇಲಿನ ಅನೈತಿಕ ಪೊಲೀಸ್‌ ಗಿರಿ ನಡೆದ ವಾರದ ಬಳಿಕ ಅದೇ ಊರಲ್ಲಿ ಬಜರಂಗದಳದಿಂದ ಅನೈತಿಕ ಪೊಲೀಸ್‌ ಗಿರಿ ಬೆಂಬಲಿಸಿ ಬಜರಂಗದಳ ಪ್ರತಿಭಟನಾ ಬೃಹತ್ ಸಭೆ ಆಯೋಜಿಸಿತು. ವೇದಿಕೆಯಲ್ಲಿದ್ದವರು ಅತ್ಯಂತ ಕೊಳಕು ಭಾಷೆಯಲ್ಲಿ ಮುಸ್ಲಿಮರನ್ನು ನಿಂದಿಸಿದರು. ಮುಸ್ಲಿಮರ ಮನೆಯ ಹೆಣ್ಮಕ್ಕಳ ಬಗ್ಗೆ ಮಾತನಾಡುತ್ತಾರೆ. ತುಳುನಾಡು ಗೌರವಿಸುವ ಕೋಟಿ ಚೆನ್ನಯರ ಕೈಯಲ್ಲಿನ ಸುರಿಯವನ್ನು ರೌಡಿಗಳ ತಲವಾರಿಗೆ ಹೋಲಿಸಿ, ‘ಇಂತಹ ಕೃತ್ಯಕ್ಕೆ ಕೋಟಿ ಚೆನ್ನಯರು ಪ್ರೇರಣೆ’ ಎಂದು ಕೊಳಕು ಮತೀಯ ರಾಜಕಾರಣಕ್ಕೆ ಎಳೆದು ತರುತ್ತಾರೆ. ಇದೇ ರೀತಿ ಮುಂದುವರಿದರೆ ಜಿಲ್ಲೆಯ ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಅವರು ಪ್ರಶ್ನಿಸಿದರು.

ಅಭಿವೃದ್ಧಿ ಕಡೆಗೆ ಗಮನ ಹರಿಸದೇ ಭ್ರಷ್ಟಾಚಾರಕ್ಕೆ ಮುಂದಾಗಿರುವ ಸ್ಥಳೀಯ ಶಾಸಕರ ವಿರುದ್ಧ ಆಡಳಿತ ಅಲೆ ಬೀಸುತ್ತಿದೆ. ಸಹಜವಾಗಿ ಬಿಜೆಪಿ ಆಡಳಿತ ಜನರಲ್ಲಿ ಅತೃಪ್ತಿ ಮೂಡಿಸಿದೆ. ಇಂತಹ ಸಂದರ್ಭದಲ್ಲಿ ಜನರ ಗಮನ ಬೇರೆಡೆ ಸೆಳೆಯಲು, ವೋಟ್‌ ಬ್ಯಾಂಕ್ ಗಟ್ಟಿಗೊಳಿಸುವ ಭಾಗವಾಗಿ ಕೊಳಕು ರಾಜಕಾರಣ ನಡೆಯುತ್ತಿದೆ. ಇದರ ಪರಿಣಾಮವೇ ಕರಾವಳಿಯಲ್ಲಿನ ಅನೈತಿಕ ಪೊಲೀಸ್‌ ಗಿರಿಯಾಗಿದೆ. ಕೃತ್ಯಗಳಲ್ಲಿನ ಗೂಂಡಾಗಳನ್ನು ಮಹಾನ್ ನಾಯಕರು ಎನ್ನುವ ನೆಲೆಗಟ್ಟಲ್ಲಿ ಅಂತಹವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಈ ರಾಜಕೀಯ ಖಂಡನೀಯ ಎಂದರು.

ನಿರಂತರ ಪ್ರತಿಭಟನೆ ನಡೆಸಿ, ಪೊಲೀಸ್ ಠಾಣೆಗೆ ದೂರು ಕೊಟ್ಟ 24 ಗಂಟೆಯ ನಂತರ ಸೆಕ್ಷನ್ ಹಾಕಲಾಗಿದೆ. ಆದರೆ ಚೈತ್ರಾ ಕುಂದಾಪುರ ಅವರನ್ನು ಬಂಧಿಸಲು ಪೊಲೀಸರಿಗೆ ಏನು ಅಡ್ಡಿ? ಸಾರ್ವಜನಿಕ ವೇದಿಕೆಗಳಲ್ಲಿ ಅವಾಚ್ಯ ಶಬ್ದಗಳಿಂದ ಮಾತನಾಡುವ, ಧರ್ಮವೊಂದರನ್ನು ಸಾರಾಸಗಟಾಗಿ ನಿಂದಿಸುವ, ಹಿರಿಯ ರಾಜಕಾರಣಿಗಳ ಮಕ್ಕಳ, ಅವರೊಂದಿಗೆ ಪ್ರೇಮ ಪ್ರಕರಣ ಇದೆ ಎಂದು ಆಧಾರ ರಹಿತವಾಗಿ ಹೇಳುವುದು ಸಲ್ಲದು ಎಂದರು.

ಸುರತ್ಕಲ್ ಪ್ರಚೋದನಕಾರಿ ಹೇಳಿಕೆ ನೀಡಿದ ಎರಡು ದಿನಗಳ ನಂತರ ಸುಮೊಟೊ ಕೇಸಿನ ಬದಲಾಗಿ ದೂರಿನ ಮೇಲೆ ಎಫ್‌ಐಆರ್ ದಾಖಲಾಗುತ್ತದೆ. ಆದರೆ ಚೈತ್ರಾಳ ಬಂಧನವಾಗಿಲ್ಲ. ಸಾಮಾನ್ಯವಾಗಿ ಉದ್ರೇಕಕಾರಿ, ಪ್ರಚೋದನಕಾರಿ, ಧರ್ಮ ನಿಂದನೆಯಂತಹ ಭಾಷಣಗಳು ವರದಿಯಾದಾಗ, ಭಾಷಣ ಮಾಡಿದವರಷ್ಟೇ ಅಲ್ಲ, ವೇದಿಯಲ್ಲಿದ್ದವರು, ಕಾರ್ಯಕ್ರಮ ಆಯೋಜಕರ ವಿರುದ್ಧವೂ ಕೇಸು ದಾಖಲಿಸುವುದು ರಾಜ್ಯದಲ್ಲಿನ ಪೊಲೀಸ್ ಕ್ರಮ. ಆದರೆ ಕೇವಲ ದೂರು ಆಧರಿಸಿ ಚೈತ್ರಾ ಕುಂದಾಪುರ ವಿರುದ್ಧ ಪ್ರಕರಣ ದಾಖಲಾಗಿದೆ. ಬಜರಂಗದಳದವರ ಮೇಲೆ ಯಾವುದೇ ಪ್ರಕರಣವನ್ನು ಪೊಲೀಸರು ದಾಖಲಿಸಿಲ್ಲ. ಚೈತ್ರಾ ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎನ್ನುವುದಾದರೆ ಇದರ ಅರ್ಥ ಏನು ಎಂದು ಪ್ರಶ್ನಿಸಿದರು.

‘ಕೈಕಟ್ಟಿ ಕುಳಿತ ಮಂಗಳೂರು ಪೊಲೀಸರು’

ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಅವರ ಮೇಲೆ ಮಂಗಳೂರು ಜನತೆಗೆ ಅಪಾರ ನಿರೀಕ್ಷೆ ಇತ್ತು. ಪುಂಡ-ಪೋಕರಿಗಳು ಹಲ್ಲೆ ಮಾಡಿದರೆ, ಪ್ರಚೋದನಕಾರಿ ಹೇಳಿಕೆ ನೀಡಿದರೆ ಮಂಗಳೂರು ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ. ಇದು ಕೇವಲ ರಾಜ್ಯ ಸರಕಾರದ ವೈಫಲ್ಯವಷ್ಟೇ ಅಲ್ಲ, ಪೊಲೀಸ್ ಇಲಾಖೆಯ ವೈಫಲ್ಯ. ಇದರಿಂದ ಪೊಲೀಸ್ ಇಲಾಖೆಯ ಮೇಲಿನ ಗೌರವ ಸರ್ವನಾಶವಾಗಲಿದೆ. ಐಪಿಎಸ್ ಅಧಿಕಾರಿಗಳು ಶಾಸಕರು, ಸಂಸದರ ಮಾತಿನಂತೆ ಪೊಲೀಸರು ಅಧಿಕಾರ ನಡೆಸುವ ಅಗತ್ಯವಿಲ್ಲ. ಚೈತ್ರಾಳನ್ನು ಕೂಡಲೇ ಬಂಧಿಸಬೇಕು. ಕಾರ್ಯಕ್ರಮ ಆಯೋಜಿಸಿದ ಬಜರಂಗದಳದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಪೊಲೀಸರು ಚೈತ್ರಾಳನ್ನು ರಕ್ಷಿಸುವ ಕೆಲಸ ಮಾಡಿದರೆ ಜಾತ್ಯತೀತ ಸಂಘಟನೆಗಳಿಂದ ಸುರತ್ಕಲ್ ಠಾಣೆಗೆ ಮೆರವಣಿಗೆ ಮಾಡಲು ಅವಕಾಶ ಕೊಡಬೇಡಿ ಎಂದು ಪೊಲೀಸರಿಗೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದರು.

ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷ  ಸುನೀಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ಜೆಡಿಎಸ್ ಮಹಿಳಾ ಮುಖಂಡರಾದ ಸುಮತಿ‌ ಎಸ್ ಹೆಗ್ಡೆ, ಮನೋಜ್ ವಾಮಂಜೂರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ವೇಳೆ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷರಾದ ರಫೀಕ್ ಹರೇಕಳ, ಕಾರ್ಯದರ್ಶಿ ಸುನಿಲ್‌ ತೇವುಲ , ಡಾ ಕೃಷ್ಣಪ್ಪ ಕೊಂಚಾಡಿ, ಜೇರಾಲ್ಡ್ ಟವರ್, ಯಾದವ ಶೆಟ್ಟಿ, ಯೋಗಿಶ್ ಜಪ್ಪಿನಮೊಗರು, ಅಲ್ತಾಫ್ ತುಂಬೆ, ಕೃಷ್ಣ ತಣ್ಣೀರುಬಾವಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News