×
Ad

ಪಾದೂರು ಯೋಜನೆ; ಸಮಸ್ಯೆ ಪರಿಹರಿಸಲು ಆಗ್ರಹಿಸಿ ಡಿಸಿಗೆ ಮನವಿ

Update: 2021-10-09 21:50 IST

ಕಾಪು : ಪಾದೂರಿನಲ್ಲಿ ಕಾರ್ಯಾಚರಿಸುತ್ತಿರುವ ಐಎಸ್‍ಪಿಆರ್‍ಎಲ್ ಯೋಜನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಿಲ್ಲಾಧಿಕಾರಿಯವರಿಗೆ ಮಜೂರು ಗ್ರಾಮ ಪಂಚಾಯಿತಿ ಶುಕ್ರವಾರ ಮನವಿ ಸಲ್ಲಿಸಿತು.

ಮಜೂರು ಗ್ರಾಮ ಪಂಚಾಯತ್‍ಯ ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಪಾದೂರು ಐಎಸ್‍ಪಿಆರ್‍ಎಲ್ ಯೋಜನೆಯಲ್ಲಿ ಸ್ಥಳೀಯ ಇಬ್ಬರನ್ನು ಉದ್ಯೋಗದಿಂದ ವಜಾ ಮಾಡಿರುವ ಬಗ್ಗೆ ಮತ್ತು ಸ್ಥಳೀಯರು ಮತ್ತು ಭೂಸಂತ್ರಸ್ತರಿಗೆ ಉದ್ಯೋಗ ಒದಗಿಸುವ ಬಗ್ಗೆ ಹಾಗೂ  ಎರಡನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆಯ ಸಾಧಕ ಬಾಧಕಗಳ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಯವರ ಮತ್ತು ಐಎಸ್‍ಪಿಆರ್‍ಎಲ್ ಯೋಜನೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಶೇಷ ಗ್ರಾಮ ಸಭೆ ನಡೆಸಬೇಕು ಎಂದು ನಿರ್ಣಯಿಸಲಾಗಿತ್ತು.

ಅದರಂತೆ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿ ಆದಷ್ಟು ಬೇಗ ವಿಶೇಷ ಗ್ರಾಮ ಸಭೆ ನಡೆಸಲು ದಿನ ನಿಗದಿಪಡಿಸುವಂತೆ ಪಂಚಾಯತ್ ವತಿಯಿಂದ ಮನವಿ ಸಲ್ಲಿಸಲಾಯಿತು. ಹೇರೂರು ಗ್ರಾಮದ  ಸಮಸ್ಯೆಯ ವಿಷಯವನ್ನು ಜಿಲ್ಲಾಧಿಕಾರಿ ಯವರಿಗೆ ಮನವರಿಕೆ ಮಾಡಿ ಈ ಬಗ್ಗೆ ತಮ್ಮ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಇಲಾಖೆಯವರ ಉಪಸ್ಥಿತಿಯಲ್ಲಿ ಸಭೆ ನಡೆಸುವಂತೆ ಮನವಿ ನೀಡಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಎರಡು ವಿಚಾರಗಳ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. 

ಪಂಚಾಯತ್ ಉಪಾಧ್ಯಕ್ಷ  ಮಧುಸೂದನ್ ಸಾಲ್ಯಾನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪಾ ಜಿ ಸುವರ್ಣ, ಪಂಚಾಯತ್ ಸದಸ್ಯರಾದ, ಸಂದೀಪ್ ರಾವ್, ಪ್ರಸಾದ್ ಶೆಟ್ಟಿ ವಳದೂರು,  ಭೂ ಸಂತ್ರಸ್ತರಾದ ಸುರೇಂದ್ರ ಜೈನ್ ಮತ್ತು ಪ್ರಥ್ವಿ ಭಂಡಾರಿ ಹಾಗೂ, ಸ್ಥಳೀಯರಾದ  ಪ್ರಶಾಂತ್ ರಾವ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News