×
Ad

ಮುಸ್ಲಿಂ ವ್ಯಕ್ತಿಯ ಕಾರಿನಲ್ಲಿ ಹಿಂದೂ ಮಹಿಳೆಯರು ಪ್ರಯಾಣಿಸಿದ್ದಕ್ಕೆ ಬಜರಂಗದಳದಿಂದ ಹಲ್ಲೆ

Update: 2021-10-09 21:59 IST
ಸಮಿತ್ ರಾಜ್ - ಸಂದೀಪ್ ಪೂಜಾರಿ

ಮಂಗಳೂರು, ಅ.9: ನಗರದ ಹೊರವಲಯದ ಮೂಡುಬಿದಿರೆಯಲ್ಲಿ ಮುಸ್ಲಿಂ ಪುರುಷನೊಂದಿಗೆ ಪರಿಚಿತ ಹಿಂದೂ ಮಹಿಳೆಯರು ಕಾರಿನಲ್ಲಿ ಪ್ರಯಾಣಿಸಿದ್ದನ್ನು ಪ್ರಶ್ನಿಸಿದ ಬಜರಂಗದಳ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದು ಅನೈತಿಕ ಪೊಲೀಸ್‌ಗಿರಿ ನಡೆಸಿದ ಘಟನೆ ವರದಿಯಾಗಿದೆ.

ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಜರಂಗದಳದ ಸಮಿತ್ ರಾಜ್ (36) ಮತ್ತು ಸಂದೀಪ್ ಪೂಜಾರಿ (34) ಬಂಧಿತರು ಎಂದು ತಿಳಿದುಬಂದಿದೆ.

ಉಡುಪಿಯ ಕಾರ್ಕಳ ಮೂಲದ ಗೀತಾ, ಮಂಜುಳಾ, ಅಶ್ರಫ್, ಪತ್ನಿ ಸೌದ ಹಲ್ಲೆಗೊಳಗಾದವರು.

ಶನಿವಾರ ಬೆಳಗ್ಗೆ ಉಡುಪಿಯ ಕಾರ್ಕಳ ಮೂಲದ ಗೀತಾ ತನ್ನ ಸ್ನೇಹಿತೆ ಮಂಜುಳಾ ಎಂಬವರ ಜೊತೆ ತನ್ನ ಆ್ಯಕ್ಟಿವಾ ಸ್ಕೂಟಿಯಲ್ಲಿ ಮನೆಯಿಂದ ಮೂಡುಬಿದಿರೆಯ ಹನುಮಾನ್ ದೇವಸ್ಥಾನಕ್ಕೆ ಪೂಜೆಗೆಂದು ತೆರಳಿದ್ದರು. ಮಾರ್ಗ ಮಧ್ಯೆ ಸಾಣೂರು ಎಂಬಲ್ಲಿ ಗೀತಾ ಅವರ ಪರಿಚಯದ ಅಶ್ರಫ್ ಹಾಗೂ ಅವರ ಪತ್ನಿ ಸೌದ ಭೇಟಿಯಾಗಿದ್ದಾರೆ. ಮಾರುತಿ ಆಲ್ಟೊ ಕಾರು ನಿಲ್ಲಿಸಿದ ಅಶ್ರಫ್ ಗೀತಾ ಅವರೊಂದಿಗೆ ಮಾತಿಗಿಳಿದರು. ಈ ವೇಳೆ ಕುಷಲೋಪರಿ ವಿಚಾರಿಸಿದ ಗೀತಾ, ಮೂಡುಬಿದರೆಯ ಹನುಮಾನ್ ದೇವಸ್ಥಾನಕ್ಕೆ ಹೋಗುತಿರುವುದಾಗಿ ತಿಳಿಸಿದರು. ಈ ವೇಳೆ ಅಶ್ರಫ್ ತಾನು ಕೂಡ ಮೂಡಬಿದಿರೆಯ ತೋಡಾರ್ ಕಡೆಗೆ ಹೋಗುವುದಾಗಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಗೀತಾ, ‘ನಾವು ಕೂಡ ನಿಮ್ಮ ಕಾರಿನಲ್ಲಿ ಮೂಡಬಿದಿರೆಯವರೆಗೆ ಬರುವುದಾಗಿ ಮನವಿ ಮಾಡಿದ್ದಾರೆ. ಇದಕ್ಕೆ ಸಮ್ಮತಿಸಿದ ಅಶ್ರಫ್ ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಮೂಡುಬಿದರೆ ಕಡೆಗೆ ಕಾರು ತೆರಳುತ್ತಿತ್ತು. ಬೆಳಗ್ಗೆ 10:30ರ ಸುಮಾರಿಗೆ ಕಾರು ಕೆಸರುಗದ್ದೆ ಎಂಬಲ್ಲಿ ತಲುಪುತ್ತಿದ್ದಂತೆ ಎರಡು-ಮೂರು ಬೈಕ್‌ಗಳಲ್ಲಿ ಬಂದ ಆರರಿಂದ ಎಂಟು ಮಂದಿ ಬಜರಂಗದಳ ಕಾರ್ಯಕರ್ತರು ಕಾರಿಗೆ ಅಡ್ಡ ಹಾಕಿ ನಿಲ್ಲಿಸಿದ್ದಾರೆ.

ಕಾರಿನ ಬಾಗಿಲುಗಳನ್ನು ತೆಗೆದ ದುಷ್ಕರ್ಮಿಗಳು, ಗೀತಾ ಹಾಗೂ ಅವರ ಸ್ನೇಹಿತೆ ಮಂಜುಳಾ ಅವರನ್ನು ಉದ್ದೇಶಿಸಿ, ‘ನೀವು ಮುಸ್ಲಿಂ ಅವರ ವಾಹನದಲ್ಲಿ ಏಕೆ ಬರುತ್ತೀರಿ? ನಿಮ್ಮ ಸಂತಾನದವರಾ? ನಿಮಗೆ ಇವರ ಪರಿಚಯ ಹೇಗೆ? ನಿಮಗೆ ಬಸ್ ಇಲ್ಲವೇ? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದಿದ್ದಾರೆ. ಅಲ್ಲದೆ, ಕಾರು ಮಾಲಕ ಅಶ್ರಫ್ ಹಾಗೂ ಅವರ ಪತ್ನಿಗೂ ದುಷ್ಕರ್ಮಿಗಳು ಜೋರು ಮಾಡುತ್ತಾ, ‘ಕಾರಿನಿಂದ ಕೆಳಗೆ ಇಳಿಯಿರಿ, ಇವರನ್ನು ಏಕೆ ಕಾರಿನಲ್ಲಿ ಕುಳ್ಳಿರಿಸಿಕೊಂಡು ಬಂದದ್ದು? ಎಂದು ಏರು ಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದಿದ್ದಾರೆ ಎಂದು ದೂರಲಾಗಿದೆ.

ದುಷ್ಕರ್ಮಿಗಳ ಪೈಕಿ ಬಿಳಿ ಅಂಗಿ, ಕೇಸರಿ ಲುಂಗಿ ಧರಿಸಿ ಕಾಲು ಕುಂಟುತಿದ್ದ ವ್ಯಕ್ತಿ ಇತರರೊಂದಿಗೆ ಸೇರಿ ಗೀತಾ ಮತ್ತು ಮಂಜುಳಾ ಅವರ ಮೈಗೆ ಕೈ ಹಾಕಿ ಕಾರಿನಿಂದ ಹೊರಗೆ ಎಳೆದಿದ್ದಾರೆ. ಅವರ ಮೊಬೈಲ್ ಫೋನ್‌ನಿಂದ ಫೋಟೋ ಹಾಗೂ ವೀಡಿಯೊ ಚಿತ್ರೀಕರಣ ಮಾಡಿ ಮಾನಹಾನಿಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ 354 (ಹಲ್ಲೆ), 153 ಎ (ಧಾರ್ಮಿಕ ಹಕ್ಕುಗಳ ಉಲ್ಲಂಘನೆ), 504 (ನಿಂದನೆ), 506 (ಕೊಲೆ ಬೆದರಿಕೆ) ಸೆಕ್ಷನ್‌ಗಳ ಅಡಿಯಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರ ಬಂಧನ, ಇನ್ನುಳಿದವರಿಗಾಗಿ ಶೋಧ: ಕಮಿಷನರ್

ಪ್ರಕರಣದ ನಾಲ್ಕು ಮಂದಿ ಸಂತ್ರಸ್ತರು ಕೂಡ ಉಡುಪಿಯ ಕಾರ್ಕಳ ಮೂಲದವರು. ಕಾರಿನಲ್ಲಿ ತೆರಳುತ್ತಿದ್ದ ಮಹಿಳೆಯರಿಗೆ ಅಗೌರವ ತರುವ ರೀತಿಯಲ್ಲಿ ದುಷ್ಕರ್ಮಿಗಳು ವರ್ತಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News