ಕತರ್ ಇಂಡಿಯನ್ ಸೋಷಿಯಲ್ ಫೋರಂ ನಿಂದ ಆರೋಗ್ಯ ತಪಾಸಣಾ ಶಿಬಿರ

Update: 2021-10-10 12:01 GMT

ದೋಹ : ಕತರ್ ಇಂಡಿಯನ್ ಸೋಷಿಯಲ್ ಫೋರಂ ವತಿಯಿಂದ, ಸಿ-ರಿಂಗ್ ರಸ್ತೆಯಲ್ಲಿರುವ ನಸೀಮ್ ಮೆಡಿಕಲ್ ಸೆಂಟರ್ ನ ಸಹಯೋಗದೊಂದಿಗೆ, ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಆಝಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ವಾಹನ ಚಾಲಕರು ಹಾಗೂ ಕಡಿಮೆ ವೇತನ ಪಡೆಯುವ ಕಾರ್ಮಿಕರಿಗಾಗಿ ಆಯೋಜಿಸಿದ್ದ ಈ ಉಚಿತ ಶಿಬಿರದಲ್ಲಿ, ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿದ್ದ 850 ಮಂದಿ ಉಪಯೋಗ ಪಡೆದರು.

ಶಿಬಿರದಲ್ಲಿ ಅಗತ್ಯವಾದ ಬ್ಲಡ್ ಪ್ರೆಷರ್, ಬಿಎಂಐ, ಬ್ಲಡ್ ಶುಗರ್, ಟೋಟಲ್ ಕ್ಲೋರೋಸ್ಟೆರಾಲ್ ಇನ್ನಿತರ ಟೆಸ್ಟ್ ಗಳ ನಂತರ, ನುರಿತ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆಯನ್ನು ಪಡೆಯುವ ಅವಕಾಶವನ್ನು ಪ್ರತಿಯೊಬ್ಬರಿಗೂ ಕಲ್ಪಿಸಲಾಗಿತ್ತು. ಇದರೊಂದಿಗೆ, ನೇತ್ರ ವೈದ್ಯರು ಮತ್ತು ದಂತ ವೈದ್ಯರಿಂದ ಕಣ್ಣಿನ ಮತ್ತು ದಂತ ಪರೀಕ್ಷೆಯನ್ನು ಮಾಡಿ, ಅಗತ್ಯವಿದ್ದವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು.

ಈ ಶಿಬಿರದ ಅಧ್ಯಕ್ಷತೆಯನ್ನು ಕತರ್ ಇಂಡಿಯನ್ ಸೋಷಿಯಲ್  ಫೋರಂ ನ ಅಧ್ಯಕ್ಷರಾದ ಸಯೀದ್ ಕೊಮಾಚಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾರತೀಯ ದೂತವಾಸದ ದ್ವಿತೀಯ ಕಾರ್ಯದರ್ಶಿ (ಮಾಹಿತಿ, ಶಿಕ್ಷಣ ಮತ್ತು ಸಂಸ್ಕೃತಿ) ಶ್ರೀ ಕುಲ್ಜಿತ್ ಸಿಂಗ್ ಅರೋರ ಶಿಬಿರಉದ್ಘಾಟನೆ ಮಾಡಿ, ಕತರ್ ಇಂಡಿಯನ್ ಸೋಷಿಯಲ್ ಫೋರಂ ನ ಸಮಾಜ ಸೇವೆಯ ಕಾರ್ಯಗಳನ್ನು ಶ್ಲಾಘಿಸಿ, ಭಾರತೀಯ ದೂತವಾಸದಿಂದ, ಅನಿವಾಸಿ ಭಾರತೀಯರಿಗೆ ದೊರೆಯುವ ಸೇವೆಗಳ ಬಗ್ಗೆ ವಿವರಿಸಿ, ಅದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಇತರ ಅತಿಥಿಗಳಾಗಿ ಆಗಮಿಸಿದ್ದ ಐಸಿಸಿ ಅಧ್ಯಕ್ಷರಾದ  ಕೆ ಏನ್ ಬಾಬುರಾಜನ್, ಐಸಿಬಿಎಫ್ ಅಧ್ಯಕ್ಷರಾದ ಝಿಯಾದ್ ಉಸ್ಮಾನ್, ನಸೀಮ್ ಮೆಡಿಕಲ್ ಸೆಂಟರ್ ನ ಡಾ. ಮುನೀರ್ ಅಲಿ ಇಬ್ರಾಹಿಮ್, ಬಾಬು ಶಾನವಾಝ್, ರಿಷಾದ್ ಮತ್ತು ಡಾ. ಮೊಹಮ್ಮದ್ ಶಮೀಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಮೊಹಮ್ಮದ್ ಶಮೀಮ್, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ಕತರ್ ಇಂಡಿಯನ್ ಸೋಷಿಯಲ್ ಫೋರಂ, ಕೇರಳ  ರಾಜ್ಯಾಧ್ಯಕ್ಷ ಮೊಹಮ್ಮದ್ ಅಲಿ, ಕಾರ್ಯದರ್ಶಿಗಳಾದ ಅಹಮದ್ ಪ್ರಾಸ್ತಾವಿಕ ಭಾಷಣ ಮತ್ತು ಸ್ವಾಗತ ಭಾಷಣ ಮಾಡಿದರು. ಉಸ್ಮಾನ್ ಕಾರ್ಯಕ್ರಮವನ್ನು ನಿರೂಪಿಸುವುದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News