ಹರ್ಯಾಣದಲ್ಲಿ ಬಿಜೆಪಿ ಸಂಸದನ ಬೆಂಗಾವಲು ವಾಹನ ಢಿಕ್ಕಿ: ಪ್ರತಿಭಟನಕಾರರ ವಿರುದ್ಧವೇ ಪ್ರಕರಣ ದಾಖಲು

Update: 2021-10-10 16:55 GMT
Photo: NDTV

ಚಂಡಿಗಢ, ಅ. 10: ಬಿಜೆಪಿ ಸಂಸದ ಇದ್ದ ಬೆಂಗಾವಲು ವಾಹನ ಡಿಕ್ಕಿಯಾದ ಪ್ರತಿಭಟನಕಾರರ ವಿರುದ್ಧವೇ ಹರ್ಯಾಣ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ, ತಮ್ಮ ದೂರಿನ ಆಧಾರದಲ್ಲಿ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ರೈತರ ಗುಂಪೊಂದು ಆಕ್ರೋಶ ವ್ಯಕ್ತಪಡಿಸಿದೆ. ಘಟನೆಗೆ ಸಂಬಂಧಿಸಿ ರೈತರು ನರೈನ್‌ಘಡದ ಆಹಾರಧಾನ್ಯದ ಮಾರುಕಟ್ಟೆಯಲ್ಲಿ ಸೇರಿ ಪ್ರತಿಭಟನೆ ಆರಂಭಿಸಿದ್ದರು. ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದಿದ್ದರು. ಆದರೆ, ಈಗ ಪೊಲೀಸರು ಪ್ರತಿಭಟನಕಾರರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ.

‘‘ನಮಗೆ ಯಾವುದೇ ಪುರಾವೆ ದೊರೆತರೂ ನಾವು ಅದಕ್ಕನುಗುಣವಾಗಿ ಕ್ರಮ ಕೈಗೊಳ್ಳಲಿದ್ದೇವೆ. ನಾವು ಯಾರಿಗೂ ಅನ್ಯಾಯವಾಗಲು ಬಿಡಲಾರೆವು. ಯಾವುದೇ ಒತ್ತಡವಿದ್ದರೂ ನಾವು ತಪ್ಪು ಹೆಜ್ಜೆ ಇರಿಸಲಾರೆವು. ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಎಲ್ಲ ವ್ಯವಸ್ಥೆ ಮಾಡಿದ್ದೇವೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಹೇಳಿದ್ದರು.

  ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಲು ಗುರುವಾರ ಸೇರಿದ್ದ ಜನರ ಗುಂಪಿಗೆ ಬಿಜೆಪಿ ಸಂಸದ ನಯಾಬ್ ಸೈನಿ ಅವರನ್ನು ಕರೆದೊಯ್ಯುತ್ತಿದ್ದ ವಾಹನ ಢಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಓರ್ವ ಪ್ರತಿಭಟನಕಾರ ಗಾಯಗೊಂಡಿದ್ದರು ಎಂದು ಹರ್ಯಾಣದ ರೈತರು ಆರೋಪಿಸಿದ್ದಾರೆ.

ಪ್ರತಿಭಟನೆ ನಡೆಸಿದ ರೈತರ ವಿರುದ್ಧ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ, ತಾವು ನೀಡಿದ ದೂರಿನ ಆಧಾರದಲ್ಲಿ ಯಾವುದೇ ಎಫ್‌ಐಆರ್ ದಾಖಲಿಸಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮಾಲಕತ್ವದ ಹಾಗೂ ಅವರ ಪುತ್ರ ಆಶಿಷ್ ಮಿಶ್ರಾ ಚಲಾಯಿಸುತ್ತಿದ್ದ ವಾಹನ ಸೇರಿದಂತೆ ಬೆಂಗಾವಲು ವಾಹನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಢಿಕ್ಕಿ ಹೊಡೆಸಿದ ಪರಿಣಾಮ ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ ಘಟನೆಯ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News