ಮಂಗಳೂರು ದಕ್ಕೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
Update: 2021-10-11 17:43 IST
ಮಂಗಳೂರು, ಅ.11: ನಗರದ ಬಂದರ್‌ನ ದಕ್ಷಿಣ ದಕ್ಕೆಯ ಕುದುರು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ರವಿವಾರ ತಡರಾತ್ರಿ ಪತ್ತೆಯಾಗಿದೆ.
ಸುಮಾರು ಐದು ಅಡಿ ಎತ್ತರದ, ಅಂದಾಜು 45 ವರ್ಷದ ಅಪರಿಚಿತ ಮೃತದೇಹವು ಸಂಪೂರ್ಣ ಕೊಳೆತಿದ್ದು, ಅಸ್ತಿಪಂಜರವನ್ನು ಹೋಲುವ ರೀತಿ ಮೂಳೆಗಳು ಕಂಡುಬಂದಿವೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಮೃತದೇಹ ಪರಿಶೀಲನೆ ನಡೆಸಿದ್ದಾರೆ. ಮೃತದೇಹವು ಕೊಳೆತು, ಅಸ್ತಿಪಂಜರವಾಗಿದೆ. ಇದರಿಂದ ಮೃತದೇಹವು ಗಂಡು ಅಥವಾ ಹೆಣ್ಣಿನದ್ದೋ ಎಂದು ಪತ್ತೆ ಹಚ್ಚಲು ಕೂಡ ಅಸಾಧ್ಯವಾಗಿದೆ. ಮೃತರು ಆಕಸ್ಮಿಕವಾಗಿ ಜಾರಿ ನೀರಲ್ಲಿ ಬಿದ್ದು ಮುಳುಗಿರಬಹುದು ಅಥವಾ ಇನ್ನಾವುದೇ ಕಾರಣದಿಂದ ನೀರಲ್ಲಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಾರಸುದಾರರು ಇದ್ದಲ್ಲಿ ಮಂಗಳೂರು ದಕ್ಷಿಣ ಠಾಣೆಯನ್ನು (ಪಾಂಡೇಶ್ವರ) (0824- 220518) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.