×
Ad

ಕೋಟ ಬ್ಲಾಕ್ ಕಾಂಗ್ರೆಸ್‌ನಿಂದ ಬೃಹತ್ ಪಂಜಿನ ಮೆರವಣಿಗೆ

Update: 2021-10-11 19:43 IST

ಕೋಟ, ಅ.11: ಬಿಜೆಪಿ ಸರಕಾರ ಹಿಂದೂ ಧಾರ್ಮಿಕ ಕೇಂದ್ರ ಧ್ವಂಸ ಮಾಡುವ ಮೂಲಕ ಹಿಂದೂ ವಿರೋಧಿ ನೀತಿ ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ರವಿವಾರ ಕೋಟದಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ ಮಾರೋಳಿ, ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಹಿಂದುಗಳ ಓಟು ಪಡೆದು ಅಧಿಕಾರಕ್ಕೆ ಬಂದಿದೆ. ಆದರೆ ಈಗ ಅದು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಬಿಜೆಪಿ ಹಿಂದು ಕಾರ್ಯಕರ್ತರನ್ನು ಛೂ ಬಿಟ್ಟು ಅವರನ್ನೆ ಕೊಲೆ ಮಾಡಿಸಿ ಸಂಭ್ರಮಿಸುವ ಪಕ್ಷವಾಗಿದೆ. ಎಲ್ಲೆಲ್ಲಿ ಕೊಲೆ ನಡೆಯುತ್ತದೆಯೋ ಅಲ್ಲಲ್ಲಿ ಬಿಜೆಪಿ ಮುಖಂಡರುಗಳಿರುತ್ತಾರೆ ಎಂದು ಆರೋಪಿಸಿದರು.

ಬೆಲೆ ಏರಿಕೆಯಿಂದ ಜನ ಹೈರಾಣರಾಗಿದ್ದಾರೆ. ಹಿಂದೆ ಇದ್ದ ಕಾಂಗ್ರೆಸ್ ಆಡಳಿತ ಜನರ ಭವಣೆಗೆ ತಕ್ಕಂತೆ ಆಡಳಿತ ನಡೆಸಿದೆ. ಶರತ್ ಮಡಿವಾಳ, ಪರೇಶ್ ಮೇಸ್ತಾ, ಪ್ರವೀಣ್ ಪೂಜಾರಿ ಹೀಗೆ ಸಾಕಷ್ಟು ಹಿಂದೂ ಕುಟುಂಬಗಳನ್ನು ಬೀದಿ ಬರುವಂತೆ ಮಾಡಿ ಅವರಿಗೆ ಯಾವುದೇ ರೀತಿಯ ಸೌಲಭ್ಯ ನೀಡಲು ಬಿಜೆಪಿ ಯಿಂದ ಸಾಧ್ಯವಾಗಲಿಲ್ಲ ಎಂದು ಅವರು ಟೀಕಿಸಿದರು.

ಪಂಜಿನ ಮೆರವಣಿಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಚಾಲನೆ ನೀಡಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಕಛೇರಿಯಿಂದ ಸಾಲಿಗ್ರಾಮ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಯಿತು. ಅಧ್ಯಕ್ಷತೆಯನ್ನು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ವಹಿಸಿದ್ದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ವಿಕಾಸ್ ಹೆಗ್ಡೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ನಟರಾಜ್ ಹೊಳ್ಳ, ಮುಖಂಡರಾದ ದಿನೇಶ್ ಬಂಗೇರ, ಗಣೇಶ್ ನೆಲ್ಲಿಬೆಟ್ಟು, ರವೀಂದ್ರ ಕಾಮತ್, ಶ್ರೀನಿವಾಸ ಅಮೀನ್, ರೋಶನಿ ಒಲಿವೇರಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News