ಕಟ್ಟಡ ಕಾರ್ಮಿಕರ ಅಖಿಲ ಭಾರತ ಬೇಡಿಕೆ ದಿನಾಚರಣೆ
ಕುಂದಾಪುರ, ಅ.11: ಕಟ್ಟಡ ಕಾರ್ಮಿಕರ ಕಾನೂನು ಹಾಗೂ ಸೆಸ್ ಕಾನೂನು -1996ನ್ನು ತಿದ್ದುಪಡಿ ಮಾಡುತ್ತಿರುವ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ ಡಿ.2 ಮತ್ತು 3ರಂದು ಸಿಡಬ್ಲಎಫ್‌ಐ ಅಖಿಲ ಭಾರತ ಸಮಿತಿ ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ತಿಳಿಸಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ನೀಡಿರುವ ಕರೆಯಂತೆ ಕುಂದಾಪುರದಲ್ಲಿ ಇಂದು ನಡೆದ ಕಟ್ಟಡ ಕಾರ್ಮಿಕರ ಅಖಿಲ ಭಾರತ ಬೇಡಿಕೆ ದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು.
ಕಳೆದ ಒಂದೂವರೆ ವರ್ಷಗಳಿಂದ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ, ಬಾಕಿ ಇರುವ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಸಿಬ್ಬಂದಿ ನೇಮಕಾತಿ ಮಾಡಿ ವಿಲೇವಾರಿಗೆ ಕ್ರಮವಹಿಸಲು ಮಂಡಳಿ ಮುಂದಾಗುತ್ತಿಲ್ಲ. ಕಾರ್ಮಿಕ ಅದಾಲತ್ ಎಂಬುವುದು ಕಣ್ಣೊರೆಸುವ ತಂತ್ರವಾಗಿದೆ ಎಂದು ಅವರು ಟೀಕಿಸಿದರು.
ಸಿಐಟಿಯು ಸಂಚಾಲಕ ಎಚ್.ನರಸಿಂಹ ಮಾತನಾಡಿ, ಕಾರ್ಮಿಕರು ಹೋರಾಟದ ಮೂಲಕ ಪಡೆದಿರುವ ಕಾನೂನು ಇಂದಿನ ಕೇಂದ್ರ ಸರಕಾರ ರದ್ದು ಪಡಿಸುತ್ತಿರುವುದು ಖಂಡನೀಯವಾಗಿದೆ. ಕಟ್ಟಡ ಕಾರ್ಮಿಕರು ಪಡೆಯುತ್ತಿರುವ ಸೌಲಭ್ಯಗಳ ಕಾಯ್ದೆ ಹಿಂದೆ ಕಾರ್ಮಿಕರ ಚಳುವಳಿ ಹೋರಾಟದ ಇತಿಹಾಸವಿದೆ. ಭದ್ರತೆ ಇಲ್ಲದ ಕಟ್ಟಡ ಕಾರ್ಮಿಕರಿಗೆ ಕಾನೂನು ಕೊಂಚ ನೆಮ್ಮದಿ ನೀಡಿದೆ. ಆದರೆ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಸವಲತ್ತುಗಳನ್ನು ಕಸಿಯಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಾಸ ಭಂಡಾರಿ, ಉಪಾಧ್ಯಕ್ಷ ಸಂತೋಷ ಹೆಮ್ಮಾಡಿ, ಮುಖಂಡರಾದ ಸುರೇಶ ಪೂಜಾರಿ, ಅಲೆಕ್ಸ್ ಪಿ.ಟಿ., ಅನಂತ ಕುಲಾಲ್, ರೇಣುಕಾ, ನೀಲಾ ಮೊದಲಾದವರು ಉಪಸ್ಥಿತರಿದ್ದರು.