×
Ad

ದ.ಕ.ಜಿಲ್ಲೆಯಲ್ಲಿ ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ; ಮಂಗಳೂರಿನಲ್ಲಿ ಎಸ್ಕೆಎಸ್ಸೆಸ್ಸೆಫ್‌ನಿಂದ ಪ್ರತಿಭಟನೆ

Update: 2021-10-11 20:30 IST

ಮಂಗಳೂರು, ಅ.11: ದ.ಕ. ಜಿಲ್ಲೆಯಲ್ಲಿ ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯ ಮತ್ತು ಪ್ರವಾದಿ ಮುಹಮ್ಮದ್ (ಸ.ಅ) ಅವರ ಅವಹೇಳನ ಖಂಡಿಸಿ ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ನಿರ್ದೇಶನದಂತೆ ಮಂಗಳೂರು ವಲಯ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸೋಮವಾರ ಮಂಗಳೂರು ಮಿನಿ‌ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ವಲಯ ಅಧ್ಯಕ್ಷ ಅಬ್ದುಲ್ ಖಾದರ್ ಕಣ್ಣೂರು ವಹಿಸಿದ್ದರು. ಕಲ್ಲಡ್ಕ ಜುಮಾ ಮಸ್ಜಿದ್‌‌ನ ಮುದರ್ರಿಸ್ ಮುಹಮ್ಮದ್ ಶೈಖ್ ಫೈಝಿ ಇರ್ಫಾನಿ ಮಾತನಾಡಿ, ಪೆಟ್ರೋಲ್ ಸಹಿತ ಅಗತ್ಯ ವಸ್ತುಗಳ ದರ ಏರಿಕೆ ಮತ್ತು ರೈತರ ಪ್ರತಿಭಟನೆಯಿಂದ ಕಂಟೆಗಿಟ್ಟಿರುವ ಸರಕಾರದ ಪರವಾದ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಜನರ ಗಮನ ಬೇರೆಡೆಗೆ ಸೆಳೆಯಲು ಭಾವನಾತ್ಮಕವಾಗಿ ಕೆರಳಿಸಿ ಮುಸ್ಲಿಮರ ಮೇಲೆ ಅನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಹಲ್ಲೆ, ಸಾರ್ವಜನಿಕ ವೇದಿಕೆಗಳಲ್ಲಿ ಅವಾಚ್ಯ ಶಬ್ದಗಳಿಂದ ಭಾಷಣ ಮಾಡುತ್ತಿದ್ದಾರೆ ಎಂದರು.

ದೇಶದಲ್ಲಿ ಶ್ರೇಷ್ಠ ಸಂವಿಧಾನದಿಂದ ಕೂಡಿದ ಪೊಲೀಸ್ ವ್ಯವಸ್ಥೆಯಿದ್ದರೂ ಕೆಲವು ಸಮಾಜದ್ರೋಹಿಗಳು ಕಾನೂನು ಕೈಗೆತ್ತಿಕೊಳ್ಳುತ್ತಿವೆ. ಯಾವ ಧರ್ಮವೂ ಯಾರಿಗೂ ಧರ್ಮ ರಕ್ಷಣೆಯ ಗುತ್ತಿಗೆ ನೀಡಿಲ್ಲ. ಇಂತಹ ಸಂಘಟನೆಗಳನ್ನು ನಿಷೇಧಿಸದಿದ್ದಲ್ಲಿ ಅಪಾಯ ಕಾದಿದೆ. ಸಾರ್ವಜನಿಕ ವೇದಿಕೆಗಳಲ್ಲಿ ಇನ್ನೊಂದು ಧರ್ಮವನ್ನು ಅವಾಚ್ಯವಾಗಿ ನಿಂದಿಸುವವರನ್ನು ಮತ್ತು ಹಲ್ಲೆ ನಡೆಸುವವರನ್ನು ಯಾವುದೇ ಮುಲಾಜಿಲ್ಲದೆ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕ್ಶಾಂಪಸ್ ವಿಂಗ್ ರಾಜ್ಯ ಅಧ್ಯಕ್ಷ ಮೌಲನಾ ಇಬ್ರಾಹಿಮ್ ಬಾತೀಷ್ ಶಂಸಿ  ಮಾತನಾಡಿದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಅಡ್ಯಾರ್ ಕಣ್ಣೂರು ಮಸೀದಿಯ ಖತೀಬ್ ಅನ್ಸಾರ್ ಪೈಝಿ,ಮುದರ್ರಿಸ್ ಮುಸ್ತಫ ಅನ್ಸಾರಿ, ಬೆಂಗರೆಯ ಖಿಲ್ರ್ ಮಸೀದಿಯ ಇಮಾಮ್ ನಾಸಿರ್ ಕೌಸರಿ, ವಲಯ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಕಣ್ಣೂರು, ಕೋಶಾಧಿಕಾರಿ ಹಾರೀಶ್ ಕುದ್ರೋಳಿ, ವರ್ಕಿಂಗ್ ಕಾರ್ಯದರ್ಶಿ ಹಾಜಿ ಉಮ್ಮರ್ ಬೆಂಗರೆ, ಜಿಲ್ಲಾ ಸಹಚಾರಿ ರೀಲೀಫ್ ಮುಹಮ್ಮದ್ ರಫೀಕ್ ಪೈಝಿ, ವಿಖಾಯ ಜನರಲ್ ಕನ್ವೀನರ್ ಅಫ್ಸರ್ ಕುದ್ರೋಳಿ, ಅಡ್ಯಾರ್ ಕಣ್ಣೂರು ಜಂಇಯ್ಶತುಲ್ ಮುಅಲ್ಲಿಂನ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಹನೀಫಿ, ನಿಯಾಝ್ ಫೈಝಿ ಅಮೆಮಾರ್, ನಝೀರ್ ವಳಚ್ಚಿಲ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News