ಪುತ್ತೂರು: ಪ್ರಚೋದನಕಾರಿ ಭಾಷಣ ವಿರೋಧಿಸಿ ಎಸ್ಕೆಎಸ್ಸೆಸ್ಸೆಫ್ ಪ್ರತಿಭಟನೆ

Update: 2021-10-11 15:15 GMT

ಪುತ್ತೂರು: ಪ್ರಚೋದನಕಾರಿ ಭಾಷಣ ಮಾಡಿ ಶಾಂತವಾಗಿದ್ದ ನಾಡಿನಲ್ಲಿ ಸಮಸ್ಯೆ ಹುಟ್ಟು ಹಾಕುತ್ತಿರುವ ಸಮಾಜದ ಸ್ವಾಸ್ಥ್ಯ ಕೆಡಿಸುವ ದುಷ್ಟ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಸ್ಲಿಮರನ್ನು ತೋರಿಸಿ ಭೀತಿಯ ವಾತಾವರಣ ಸೃಷ್ಠಿಸಲು ಪ್ರಯತ್ನಿಸುತ್ತಿರುವ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕು ಹಾಗೂ ಪ್ರವಾದಿ ನಿಂದಕರನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿ ಎಸ್‍ಕೆಎಸ್‍ಎಸ್‍ಎಫ್ ಪುತ್ತೂರು ವಲಯದ ವತಿಯಿಂದ ಪುತ್ತೂರು ಮಿನಿವಿಧಾನ ಸೌಧದ ಮುಂಬಾಗದ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿಯಲ್ಲಿ ಸೋಮವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮುಲ್ಕಿ ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಅವರು ಗಂಗೊಳ್ಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರವಾದಿಯವರನ್ನು ಅವಹೇಳನ ಮಾಡಲಾಗಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನೇ ಕೊಂದ ಗೋಡ್ಸೆಯ ಮನಸ್ಥಿತಿ ಇವರದ್ದಾಗಿದ್ದು, ಗೋಡ್ಸೆ ಮಾನಸಿಕತೆಯನ್ನು ದೇಶದಲ್ಲಿ ಬಿತ್ತುವುದು ದೇಶದ ಏಕತೆ ಮತ್ತು ಸಮಗ್ರತೆಗೆ ಅಪಾಯಕಾರಿಯಾಗಿದೆ. ಇಂಥಹ ವಿದ್ಯಮಾನಗಳು ಹೆಚ್ಚಾಗದಂತೆ ನಮ್ಮ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳು ನೋಡಿಕೊಳ್ಳಬೇಕಾಗಿದೆ. ಈ ಪ್ರವೃತ್ತಿ ಮುಂದುವರಿದಲ್ಲಿ ಇಂದು ಸಾಂಕೇತಿಕವಾಗಿ ನಡೆಯುತ್ತಿರುವ ಪ್ರತಿಭಟನೆಯು ಮುಂದೆ ಬೀದಿ ಬೀದಿಯಲ್ಲಿ ನಡೆಯಬಹುದು. ಇದಕ್ಕೆ ಆಡಳಿತವು ಅವಕಾಶ ನೀಡಬಾರದು ಎಂದರು.

ಎಸ್‍ಕೆಎಸ್‍ಎಸ್‍ಎಫ್ ಪುತ್ತೂರು ವಲಯ ಅಧ್ಯಕ್ಷ ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಜಿಲ್ಲಾ ಸಮಿತಿ ಸದಸ್ಯ ರಶೀದ್ ರೆಹಮಾನಿ ಮಾತನಾಡಿದರು. ಕಾರ್ಯದರ್ಶಿ ಜಾಬಿರ್ ಫೈಝಿ ಪಾಣಾಜೆ, ಕೋಶಾಧಿಕಾರಿ ಅಶ್ರಫ್ ಮುಕ್ವೆ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ. ರಝಾಕ್ ಹಾಜಿ, ನಝೀರ್ ಅರ್ಶದಿ ಅಜ್ಜಿಕಟ್ಟೆ, ಅಬೂಬಕ್ಕರ್ ಮಲಾರ್, ಮಜೀದ್ ದಾರಿಮಿ ಮತ್ತಿರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News