ಕಾಬೂಲ್ ಹೋಟೆಲಿಂದ ತಕ್ಷಣ ಹೊರಡುವಂತೆ ಪ್ರಜೆಗಳಿಗೆ ಬ್ರಿಟನ್, ಅಮೆರಿಕಾ ಸೂಚನೆ

Update: 2021-10-11 15:22 GMT

ಕಾಬೂಲ್, ಅ.11: ಕಾಬೂಲ್ ನ ಸೆರೆನಾ ಹೋಟೆಲ್ ಸೇರಿದಂತೆ ಐಷಾರಾಮಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡದಂತೆ ಬ್ರಿಟನ್ ಮತ್ತು ಅಮೆರಿಕ ಸೋಮವಾರ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

ಕಾಬೂಲ್ ನ ಮಸೀದಿಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಹಲವರು ಮೃತಪಟ್ಟ ಬಳಿಕ ಈ ಸೂಚನೆ ಹೊರಬಿದ್ದಿದೆ. ಆಗಸ್ಟ್ ನಲ್ಲಿ ತಾಲಿಬಾನ್ ಅಫ್ಗಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿ ಸರಕಾರ ರಚಿಸಿದ್ದರೂ ಇದುವರೆಗೆ ಅಂತರಾಷ್ಟ್ರೀಯ ಮಾನ್ಯತೆ ಪಡೆಯಲು ಸಾಧ್ಯವಾಗಿಲ್ಲ. ಜತೆಗೆ ಐಸಿಸ್ ಉಗ್ರ ಸಂಘಟನೆಯ ಅಫ್ಗಾನ್ ಘಟಕದಿಂದ ತಾಲಿಬಾನ್ ಗೆ ಬೆದರಿಕೆ ಎದುರಾಗಿದ್ದು ತಾಲಿಬಾನ್ ಗಳನ್ನು ಗುರಿಯಾಗಿಸಿ ಹಲವು ಬಾಂಬ್ ದಾಳಿ ನಡೆದಿದೆ.

ಭದ್ರತೆಗೆ ಭೀತಿ ಎದುರಾಗಿರುವುದರಿಂದ ಸೆರೆನಾ ಹೋಟೆಲ್ ನಲ್ಲಿ ಅಥವಾ ಹೋಟೆಲ್ ಬಳಿ ವಾಸ್ತವ್ಯ ಹೂಡಿರುವ ಅಮೆರಿಕದ ಪ್ರಜೆಗಳು ತಕ್ಷಣ ಅಲ್ಲಿಂದ ತೆರಳಬೇಕು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ. ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ , ಹೋಟೆಲ್ ನಲ್ಲಿ ಉಳಿಯದಂತೆ, ಅದರಲ್ಲೂ ನಿರ್ಧಿಷ್ಟವಾಗಿ ಕಾಬೂಲ್ ನ ಸೆರೆನಾ ಹೋಟೆಲ್ ನಲ್ಲಿ ಪ್ರಜೆಗಳಿಗೆ ಸಲಹೆ ನೀಡಲಾಗಿದೆ ಎಂದು ಬ್ರಿಟನ್‌ ನ ವಿದೇಶ ವ್ಯವಹಾರ, ಕಾಮನ್ ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯ ಹೇಳಿಕೆ ತಿಳಿಸಿದೆ.

ಕಾಬೂಲ್ ನಲ್ಲಿರುವ ಅದ್ದೂರಿ ಹೋಟೆಲ್ ಸೆರೆನಾದಲ್ಲಿ ಬಹುತೇಕ ಉದ್ಯಮಿಗಳು, ವಿದೇಶಿ ಅತಿಥಿಗಳು ವಾಸ್ತವ್ಯ ಹೂಡುತ್ತಾರೆ. ಇದನ್ನು ಗುರಿಯಾಗಿಸಿ ಈ ಹಿಂದೆ 2ಬಾರಿ ತಾಲಿಬಾನ್ ಗಳ ದಾಳಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News