ಅ.13ರಂದು ಅದಮಾರಿನಲ್ಲಿ ಪೂರ್ಣಪ್ರಜ್ಞ ಪದವಿ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ
ಉಡುಪಿ, ಅ.11: ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಸಂಸ್ಥೆಗಳ ವತಿ ಯಿಂದ ಅದಮಾರಿನಲ್ಲಿ ನೂತನವಾಗಿ ಆರಂಭಿಸಿರುವ ಪೂರ್ಣಪ್ರಜ್ಞ ಪದವಿ ಕಾಲೇಜು ಕಟ್ಟಡದ ಶಿಲಾನ್ಯಾಸ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನೂತನ ವಿಜ್ಞಾನ ಸಮುಚ್ಛಯದ ಶಿಲಾನ್ಯಾಸ ಹಾಗೂ ಪದವಿ ಪೂರ್ವ ಕಾಲೇಜಿನ ಗಣಕ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭವು ಅ.13ರಂದು ನಡೆಯಲಿದೆ.
ಉಡುಪಿ ಪಿಪಿಸಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಅದಮಾರು ಹಿರಿಯ ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಬೆಳಗ್ಗೆ 11ಗಂಟೆಗೆ 7.40ಕೋಟಿ ರೂ. ವೆಚ್ಚದಲ್ಲಿ 40ನೇ ಸಂಸ್ಥೆಯಾಗಿ ನಿರ್ಮಿಸಲು ಉದ್ದೇಶಿಸಿರುವ ಅದಮಾರು ಪೂರ್ಣಪ್ರಜ್ಞ ಪದವಿ ಕಾಲೇಜಿನ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿರುವರು. ಬಳಿಕ ಅಲ್ಲಿನ ವಾಸುದೇವ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಅದೇ ರೀತಿ 7.46ಕೋಟಿ ವೆಚ್ಚದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನೂತನ ವಿಜ್ಞಾನ ಸಮುಚ್ಛಯಕ್ಕೆ ಶಿಲಾನ್ಯಾಸ ಹಾಗೂ 70 ಲಕ್ಷ ರೂ. ವೆಚ್ಚದ ಪದವಿ ಪೂರ್ವ ಕಾಲೇಜಿನ ಗಣಕ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ಯನ್ನು ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿರುವರು. ಬಳಿಕ ಇಲ್ಲಿನ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಸಭಾ ಕಾರ್ಯಕ್ರಮ ಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್, ಗೌರವ ಕೋಶಾ ಧಿಕಾರಿ ಪ್ರವೀಣ್ ಕುಮಾರ್, ಪ್ರಾಂಶುಪಾಲರುಗಳಾದ ರಾಮಕೃಷ್ಣ ಪೈ, ಪ್ರತಿಮಾ ಬಾಳಿಗಾ, ಡಾ.ರಾಘವೇಂದ್ರ ಎ., ಉಪಪ್ರಾಂಶುಪಾಲರಾದ ಡಾ. ಒಲ್ವಿಟಾ ಡಿಸೋಜ, ಡಾ.ಪ್ರಕಾಶ್ ರಾವ್ ಉಪಸ್ಥಿತರಿದ್ದರು.