×
Ad

ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೊರ ರಾಜ್ಯದ ಕಾರ್ಮಿಕರ ಸೇರ್ಪಡೆ: ಆಕ್ರೋಶ

Update: 2021-10-11 21:14 IST

ಮಂಗಳೂರು, ಅ.11: ಮಂಗಳೂರು ವಿಮಾನ ನಿಲ್ದಾಣವು ಅದಾನಿ ಕಂಪೆನಿಗೆ ಮಾರಾಟಗೊಂಡಾಗ ವ್ಯಕ್ತಪಡಿಸಿದ ಆತಂಕಗಳು ನಿಜವಾಗತೊಡಗಿವೆ. ವಿಮಾನ ನಿಲ್ದಾಣದ ಗುತ್ತಿಗೆ ಕಂಪೆನಿಗಳ ಅಡಿ ದುಡಿಯುತ್ತಿದ್ದ ಸ್ಥಳೀಯ ಕಾರ್ಮಿಕರನ್ನು ಹಲವು ನೆಪಗಳನ್ನು ಮುಂದಿಟ್ಟು ಕೈ ಬಿಡಲಾಗುತ್ತಿದೆ. ಹೊರ ರಾಜ್ಯದ ಗುತ್ತಿಗೆ ಕಾರ್ಮಿಕರ ಸೇರ್ಪಡೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದ ಅಗ್ನಿಶಾಮಕ ದಳಕ್ಕೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಗುತ್ತಿಗೆ ನೀಡಲು ಅವಕಾಶ ಇಲ್ಲದಿರುವುದರಿಂದ ಅದಾನಿ ಕಂಪೆನಿ ನೇರ ನೇಮಕಾತಿ ಮಾಡಬೇಕಿದೆ. 80 ಸಿಬ್ಬಂದಿ ನೇಮಕಾತಿಯ ಅಗತ್ಯ ಇದ್ದರೂ ಸದ್ಯ 20 ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅದಾನಿ ಸಂಸ್ಥೆಯು ಸ್ಥಳೀಯರಿಗೆ ಆದ್ಯತೆ ನೀಡಿ, ಪಾರದರ್ಶಕ ನೇಮಕಾತಿ ಪ್ರಕ್ರಿಯೆ ನಡೆಸುತ್ತಿಲ್ಲ. ಬದಲಿಗೆ ತನಗೆ ಅನುಭವಸ್ಥರು ಬೇಕು ಎಂದು ಹೊರ ರಾಜ್ಯಗಳಲ್ಲಿ ಸಿಬ್ಬಂದಿ ಹುಡುಕಾಟ ನಡೆಸುತ್ತಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.

ದೇಶದ ಹಲವು ಮಹಾನಗರಗಳಲ್ಲಿ ಉದ್ಯೋಗ ಕಳೆದುಕೊಂಡು ತುಳುವರು ತವರು ಜಿಲ್ಲೆಗೆ ವಾಪಸಾಗುತ್ತಿರುವ ಸಂದರ್ಭ ಹೊಸ ಉದ್ಯೋಗಾವಕಾಶಗಳು ತುಳುನಾಡಿನಲ್ಲಿ ಸೃಷ್ಟಿಯಾಗಬೇಕಿತ್ತು. ಸರಕಾರವು ಇಲ್ಲಿ ಯಾವ ಯೋಜನೆಯನ್ನೂ ಪ್ರಕಟಿಸುತ್ತಿಲ್ಲ. ಬದಲಿಗೆ ಇರುವ ಉದ್ಯೋಗಗಳನ್ನೂ ಸ್ಥಳೀಯರಿಗೆ ವಂಚಿಸಿ, ಹೊರ ರಾಜ್ಯದವರ ಪಾಲಾಗುವಂತೆ ಮಾಡಲಾಗುತ್ತಿದೆ. ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ವಿಮಾನ ನಿಲ್ದಾಣವನ್ನು ಮಾರಾಟಕ್ಕೆ ಕೊಟ್ಟಿಲ್ಲ. ಕೇವಲ ನಿರ್ವಹಣೆಗೆ ಮಾತ್ರ ಅದಾನಿ ಕಂಪೆನಿಗೆ ನೀಡಲಾಗಿದೆ ಎಂದು ಜನರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸಿದ ಬಿಜೆಪಿ ಬೆಂಬಲಿಗರು, ಈಗ ಏನು ಹೇಳುತ್ತಾರೆ ? ತುಳುನಾಡಿನ ಜನ ಈಗ ಸುಮ್ಮನಿರಬಾರದು. ಧ್ವನಿ ಎತ್ತರಿಸಬೇಕು ಎಂದರು.

ಇನ್ನು, ಮೂರು ವರ್ಷಗಳಲ್ಲಿ ಅದಾನಿ ಕಂಪೆನಿಗೆ ವಿಮಾನ ನಿಲ್ದಾಣ ನಿರ್ವಹಣೆ ತರಬೇತಿಯನ್ನು ಪೂರ್ಣಗೊಳಿಸಿ ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿ ಅಲ್ಲಿಂದ ಹೊರ ನಡೆಯಲಿದ್ದಾರೆ. ಅದರ ಭಾಗವಾಗಿ ಅದಾನಿ ಕಂಪೆನಿ ಸುಮಾರು ನೂರಕ್ಕೂ ಅಧಿಕ ಸಿಬ್ಬಂದಿಯನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆ ತಂದಿದೆ. ಈ ಪೈಕಿ ಒಬ್ಬರು ಕೂಡ ತುಳುನಾಡಿನವರಿಲ್ಲ. ಕರುನಾಡಿನವರೂ ಇರುವುದು ಅನುಮಾನ. ಎಲ್ಲ ಉತ್ತರ ಭಾರತಮಯವಾಗಿದೆ. ತುಳುನಾಡಿನವರು ಇದರ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದೆ ಅನಾಹುತಗಳು ಕಾದಿವೆ. ಕರಾವಳಿಯ ಜನತೆ ಎಚ್ಚರಗೊಳ್ಳಬೇಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News