ಗೋಳಿತ್ತೊಟ್ಟು: ಪಿಡಿಒ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

Update: 2021-10-11 15:48 GMT

ಉಪ್ಪಿನಂಗಡಿ: ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಪಿಡಿಒ ಪಿ.ವೆಂಕಟೇಶ್‍ರವರ ವರ್ಗಾವಣೆ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಪುತ್ತೂರು ಮತ್ತು ಕಡಬ ತಾಲೂಕು ಸಮಿತಿ ಹಾಗೂ ಗೋಳಿತ್ತೊಟ್ಟು ಗ್ರಾಮಸ್ಥರ ಸಹಯೋಗದಲ್ಲಿ ಅ.11ರಂದು ಗೋಳಿತ್ತೊಟ್ಟು ಗ್ರಾ.ಪಂ.ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರೊ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ದ.ಕ.ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಮಿತ್ತಬೈಲ್‍ರವರು ಮಾತನಾಡಿ, ಗ್ರಾಮದ ಅಭ್ಯುದಯದ ಚಿಂತನೆ ಹೊಂದಿದ್ದ ಪಿಡಿಒ ವೆಂಕಟೇಶ್‍ರವರ ವರ್ಗಾವಣೆ ಬಿಜೆಪಿಯವರ ನೀಚ ರಾಜಕೀಯಕ್ಕೆ ಸಾಕ್ಷಿಯಾಗಿದೆ. ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿರುವ ಪಿ.ವೆಂಕಟೇಶ್‍ರವರು ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪರವರ ಕೈಯಿಂದಲೇ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳ ಪರ ದಲಿತ ಸಂಘರ್ಷ ಸಮಿತಿ ಹಿಂದೆಯೂ ಹೋರಾಟ ಮಾಡಿದ್ದು ಮುಂದೆಯೂ ಹೋರಾಟ ನಡೆಸಲಿದೆ. ಆದ್ದರಿಂದ ವೆಂಕಟೇಶ್ ವರ್ಗಾವಣೆ ಪ್ರಕರಣದಲ್ಲಿ ಸಚಿವ ಎಸ್.ಅಂಗಾರರವರು ಮಧ್ಯಪ್ರವೇಶಿಸಿ ಸಂಜೆಯೊಳಗೆ ಅವರ ವರ್ಗಾವಣೆ ರದ್ದುಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಸಚಿವ ಎಸ್.ಅಂಗಾರರವರಿಗೆ ದಲಿತ ಸಂಘರ್ಷ ಸಮಿತಿ ಘೇರಾವ್ ಹಾಕಲಿದೆ ಎಂದು ಎಚ್ಚರಿಸಿದರು.

ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿರುವ ಡಾ.ಕುಮಾರ್ ಅವರೂ ಇಲ್ಲಿನ ಪಿಡಿಒರವರ ವರ್ಗಾವಣೆ ಆದೇಶ ರದ್ದುಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಜಿ.ಪಂ.ಕಚೇರಿ ಮುಂದೆ ಧರಣಿ ನಡೆಸುವುದಾಗಿಯೂ  ಎಚ್ಚರಿಕೆ ನೀಡಿದರು.

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ರವರು ಮಾತನಾಡಿ, ದೇಶದಲ್ಲಿ ರೈತರಿಗೆ, ಬಡವರಿಗೆ ಆಗುತ್ತಿರುವ ಬಗ್ಗೆ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಿದರೂ ಕೇಂದ್ರ ಸರಕಾರ ನ್ಯಾಯಕೊಡಿಸುವಲ್ಲಿ ವಿಫಲವಾಗಿದೆ. ಅಭಿವೃದ್ಧಿ ಕೆಲಸಗಳ ಮೂಲಕ ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ಅನ್ನು ಮಾದರಿ ಗ್ರಾಮ ಪಂಚಾಯತ್ ಆಗಿ ಮಾಡಲು ಹೊರಟಿರುವ ಪಿಡಿಒ ವೆಂಕಟೇಶ್‍ರವರನ್ನು ಅಭಿವೃದ್ಧಿ ಸಹಿಸದವರ ಷಡ್ಯಂತ್ರದಿಂದ ವರ್ಗಾವಣೆಗೊಳಿಸಲಾಗಿದೆ. ಇದರ ವಿರುದ್ಧ ದಲಿತ ಸಂಘರ್ಷ ಸಮಿತಿ ನಡೆಸುವ ಹೋರಾಟದ ಜೊತೆ ನಾವಿದ್ದೇವೆ ಎಂದರು.

ಪ್ರತಿಭಟನಾ ಸಭೆಯ ಬಳಿಕ ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡರವರ ಮೂಲಕ ಪಿಡಿಒ ವರ್ಗಾವಣೆ ರದ್ದುಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಗ್ರಾಮಸ್ಥರ ಪರವಾಗಿ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್, ಕಡಬ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಪೂವಪ್ಪ ಕರ್ಕೇರ, ಕೆಪಿಸಿಸಿ ಸದಸ್ಯ ಕೆ.ಪಿ. ತೋಮಸ್ ನೆಲ್ಯಾಡಿ,   ದ.ಕ.ಜಿಲ್ಲಾ ದಲಿತ ಸೇವಾ ಸಮಿತಿ ಸ್ಥಾಪಕ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಕೆಪಿಸಿಸಿ ಸದಸ್ಯರಾದ ಕೃಷ್ಣಪ್ಪ, ಡಾ.ರಘು, ದಲಿತ ಸಂಘರ್ಷ ಸಮಿತಿ ಸುಳ್ಯ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಸುಬ್ರಹ್ಮಣ್ಯ, ದಲಿತ ಸಂಘರ್ಷ ಸಮಿತಿ ಪುತ್ತೂರು ತಾಲೂಕು ಸಂಘಟನಾ ಸಂಚಾಲಕ ಹರೀಶ್, ಶೋಷಿತ ಸಮುದಾಯಗಳ ವೇದಿಕೆ ಅಧ್ಯಕ್ಷ ಶಶಿಧರ ಬೊಟ್ಟಡ್ಕ, ತಾ.ಪಂ. ಮಾಜಿ ಸದಸ್ಯೆ ಉಷಾ ಅಂಚನ್,  ದಲಿತ ಸಂಘರ್ಷ ಸಮಿತಿ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಸೇಸಪ್ಪ ನೆಕ್ಕಿಲು, ದಲಿತ ಸಂಘರ್ಷ ಸಮಿತಿ ಕಡಬ ತಾಲೂಕು ಮಹಿಳಾ ಘಟಕದ ಸಂಚಾಲಕಿ ಯಶೋಧ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಗಣೇಶ ಗುರಿಯಾನ, ದಲಿತ ಮುಖಂಡ ಕೆ.ಪಿ.ಆನಂದ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News