ಕೊರಿಯಾದ ಅಸ್ಥಿರತೆಗೆ ಅಮೆರಿಕ, ದಕ್ಷಿಣ ಕೊರಿಯಾ ಕಾರಣ: ಉ.ಕೊರಿಯಾ ಅಧ್ಯಕ್ಷ ಕಿಮ್

Update: 2021-10-12 18:25 GMT

ಪ್ಯಾಂಗ್ಯಾಂಗ್, ಅ.12: ಉತ್ತರಕೊರಿಯಾದ ಬಗ್ಗೆ ಅಮೆರಿಕದ ಹಗೆತನದ ನೀತಿ ಮತ್ತು ಕೊರಿಯಾ ಪರ್ಯಾಯ ದ್ವೀಪದ ಅಸ್ಥಿರತೆಗೆ ಕಾರಣವಾಗಿರುವ ದಕ್ಷಿಣ ಕೊರಿಯಾದ ಸೇನಾಬಲ ವೃದ್ಧಿಯ ಹಿನ್ನೆಲೆಯಲ್ಲಿ ತಮ್ಮ ದೇಶದ ಶಸ್ತ್ರಾಸ್ತ್ರ ಅಭಿವೃದ್ಧಿ ಕಾರ್ಯಕ್ರಮ ಅನಿವಾರ್ಯವಾಗಿದೆ ಎಂದು ಉತ್ತರಕೊರಿಯಾ ಮುಖಂಡ ಕಿಮ್‌ಜಾಂಗ್ ಉನ್ ಹೇಳಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ಕೆಸಿಎನ್‌ಎ ವರದಿ ಮಾಡಿದೆ. ಸ್ವರಕ್ಷಣೆಗಾಗಿ ಮಾತ್ರ ನಾವು ಸೇನಾಬಲ ಹೆಚ್ಚಿಸುತ್ತಿದ್ದೇವೆಯೇ ಹೊರತು ಯುದ್ಧ ಆರಂಭಿಸಲು ಅಲ್ಲ. ಅಮೆರಿಕ ನಮ್ಮ ದೇಶದೊಂದಿಗೆ ವೈರತ್ವದ ಭಾವನೆ ಹೊಂದಿಲ್ಲ ಎಂದು ಆಗಿಂದಾಗ್ಗೆ ಸಂಕೇತ ರವಾನಿಸುತ್ತದೆ. ಆದರೆ ಇದನ್ನು ನಂಬುವಂತಿಲ್ಲ ಎಂಬುದಕ್ಕೂ ಹಲವು ಕಾರಣಗಳಿವೆ ಎಂದು ದೇಶದಲ್ಲಿ ಆಯೋಜಿಸಿದ್ದ ರಕ್ಷಣಾ ಸಾಧನಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಿಮ್ ಹೇಳಿದರು.

ನಮ್ಮ ದೇಶಕ್ಕೆ ಎದುರಾಗಿರುವ ಸೇನಾ ಬೆದರಿಕೆ ಈ ಹಿಂದಿನ 10 ವರ್ಷದಲ್ಲಿ ಎದುರಾಗಿದ್ದ ಬೆದರಿಕೆಗಿಂತ ಭಿನ್ನವಾಗಿದೆ. ಕೊರಿಯ ಪರ್ಯಾಯ ದ್ವೀಪದಲ್ಲಿನ ಉದ್ವಿಗ್ನತೆಯನ್ನು ಸುಲಭವಾಗಿ ಪರಿಹರಿಸಲು ಅಮೆರಿಕಾ ಬಿಡುತ್ತಿಲ್ಲ ಎಂದವರು ಹೇಳಿದ್ದಾರೆ. ರಕ್ಷಣಾ ಸಾಧನಗಳ ಪ್ರದರ್ಶನದಲ್ಲಿ ಹ್ವಾಸಂಗ್-16 ಅಂತರ್‌ಖಂಡ ಪ್ರಕ್ಷೇಪಕ ಕ್ಷಿಪಣಿ ಸಹಿತ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗಿದೆ ಎಂದು ಕೆಸಿಎನ್‌ಎ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News