ಕೇಂದ್ರ ಸಚಿವರನ್ನು ವಜಾಗೊಳಿಸಲು ರಾಷ್ಟ್ರಪತಿ ಕೋವಿಂದ್ ಅವರನ್ನು ಒತ್ತಾಯಿಸಿದ ಕಾಂಗ್ರೆಸ್ ನಿಯೋಗ

Update: 2021-10-13 07:48 GMT

ಹೊಸದಿಲ್ಲಿ: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗವು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿದೆ. ಲಖಿಂಪುರ ಖೇರಿಯಲ್ಲಿ ಸಂಭವಿಸಿದ ಹಿಂಸಾಚಾರ ಕುರಿತಾಗಿ ಅವರೊಂದಿಗೆ ಚರ್ಚಿಸಿದೆ.

ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

ಧರಣಿ ನಿರತ ರೈತರ ಮೇಲೆ ಕಾರು ಹರಿಸಿ ಹತ್ಯೆಗೈದ ಪ್ರಕರಣದಲ್ಲಿ ಕೇಂದ್ರ ಸಚಿವರ ಪುತ್ರ ಆಶೀಶ್ ಮಿಶ್ರಾನನ್ನು ಈಗಾಗಲೇ ಬಂಧಿಸಲಾಗಿದೆ.

ಆಯೋಗವು ಅಕ್ಟೋಬರ್ 3 ರಂದು ನಡೆದ ಹಿಂಸಾಚಾರದ ಸಂಗತಿಗಳ ಕುರಿತು ರಾಷ್ಟ್ರಪತಿಗೆ ಜ್ಞಾಪನಾ ಪತ್ರವನ್ನು ಸಲ್ಲಿಸಿದೆ ಎಂದು ಪಕ್ಷ ತಿಳಿಸಿದೆ.

"ಆರೋಪಿಯ ತಂದೆ ಗೃಹ ಖಾತೆ ರಾಜ್ಯ ಸಚಿವರಾಗಿದ್ದು ಅವರ ಉಪಸ್ಥಿತಿಯಲ್ಲಿ ನ್ಯಾಯಯುತ ತನಿಖೆ ಸಾಧ್ಯವಿಲ್ಲದ ಕಾರಣ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ನಾವು ರಾಷ್ಟ್ರಪತಿಗೆ ಹೇಳಿದ್ದೇವೆ. ಅಂತೆಯೇ, ಸುಪ್ರೀಂ ಕೋರ್ಟ್‌ನ ಇಬ್ಬರು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ನಾವು ಕೂಡ ಒತ್ತಾಯಿಸಿದ್ದೇವೆ'' ಎಂದು  ರಾಹುಲ್ ಗಾಂಧಿ ಹೇಳಿದ್ದಾರೆ.

"ಲಖಿಂಪುರ ಖೇರಿ ಘಟನೆಗೆ ಸಂಬಂಧಿಸಿದಂತೆ ನಾವು ಎಲ್ಲ ವಿವರಗಳನ್ನು ರಾಷ್ಟ್ರಪತಿಗೆ ನೀಡಿದ್ದೇವೆ. ನಾವು ಎರಡು ಬೇಡಿಕೆಗಳನ್ನು ಹೊಂದಿದ್ದೇವೆ. ಹಾಲಿ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ನಡೆಯಬೇಕು ಹಾಗೂ  ಗೃಹ ಸಚಿವ ಅಜಯ್ ಮಿಶ್ರಾ ಟೆನಿ ರಾಜೀನಾಮೆ ನೀಡಬೇಕು ಅಥವಾ ವಜಾಗೊಳಿಸಬೇಕು. ಆಗ ಮಾತ್ರ ನ್ಯಾಯ ಸಾಧ್ಯವಾಗುತ್ತದೆ''ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News