ಉಡುಪಿ: ಹಲವು ಪ್ರದೇಶಗಳು ಜಲಾವೃತ

Update: 2021-10-13 07:15 GMT

ಉಡುಪಿ, ಅ.13: ಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿದ್ದ ಭಾರೀ ಮಳೆಯಿಂದ ಉಡುಪಿ ನಗರ ಹಾಗೂ ಹೊರವಲಯದ ಹಲವು ತಗ್ಗು ಪ್ರದೇಶ ಗಳಲ್ಲಿ ಕೃತಕ ನೆರೆ ಸೃಷ್ಠಿಯಾಗಿದ್ದು, ಇದರಿಂದ ಹಲವು ಮನೆಗಳು ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.

ಭಾರೀ ಮಳೆಯಿಂದಾಗಿ ರಾತ್ರಿ ವೇಳೆ ನಗರದ ಕಲ್ಸಂಕ, ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶ, ಬೈಲಕೆರೆ, ಮಠದಬೆಟ್ಟು, ಕಲ್ಮಾಡಿ, ಕೊಡವೂರು ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಸ್ಥಳೀಯರು ಇದರಿಂದ ಸಾಕಷ್ಟು ತೊಂದರೆ ಅನುಭವಿಸಂತಾಗಿದೆ.

ರಸ್ತೆಗಳು ನೀರಿನಲ್ಲಿ ಮುಳುಗಿದ ಪರಿಣಾಮ ವಾಹನ ಸವಾರರು ಸಂಚರಿಸಲು ಪರದಾಡುವಂತಾಯಿತು. ರಾತ್ರಿ ವೇಳೆ ರಾಜಾಂಗಣ ಪಾರ್ಕಿಂಗ್ ಪ್ರದೇಶ ಸಮೀಪದ ಬೈಲಕೆರೆಯಲ್ಲಿ ಸುಮಾರು ಐದಾರು ಮನೆಗಳಿಗೆ ನೀರು ನುಗ್ಗಿದ್ದು, ಅಪಾಯ ವನ್ನರಿತ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು.

ಬೋಟು ಹಾಗೂ ಇತರ ಪರಿಕರಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್ ನೇತೃತ್ವದ ಎಂಟು ಮಂದಿಯ ತಂಡ ಕಾರ್ಯಾಚರಣೆ ನಡೆಸಿ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 30 ಮಂದಿಯನ್ನು ಮನೆಯಿಂದ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದು ಕೊಂಡು ಹೋಗಲಾಯಿತು. ರಾತ್ರಿ ಪೂರ್ತಿ ನಿರಂತರವಾಗಿ ಮಳೆ ಸುರಿದಿದ್ದು, ಇಂದು ಬೆಳಗ್ಗೆ ಮಳೆ ಸ್ವಲ್ಪ ಕಡಿಮೆಯಾಗಿದೆ. ಆದರೂ ಮೋಡ ಕವಿದ ವಾತಾವರಣ ಮುಂದುವರೆದಿದೆ. ಇದರಿಂದ ಬೆಳಗ್ಗೆ ಕೆಲವು ಕಡೆ ನೆರೆಯ ನೀರು ಇಳಿಮುಖವಾಗಿವೆ. ಆದರೆ ಕಲ್ಸಂಕ, ಕೊಡವೂರು, ಕಲ್ಮಾಡಿಯ ಕೆಲವು ಮನೆಗಳು ಈಗಲೂ ನೀರಿನಿಂದ ಆವತೃಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಮಳೆಯಿಂದ ಕೃಷಿಭೂಮಿಗಳು ಹಾಗೂ ತೋಟಗಳು ಜಲಾವೃತಗೊಂಡ ಪರಿಣಾಮ ಬೆಳೆಗಳಿಗೆ ಹಾನಿಯಾಗಿವೆ. ಗದ್ದೆಯಲ್ಲಿ ಕಟಾವಿಗೆ ಸಿದ್ಧವಾಗಿರುವ ಭತ್ತದ ಪೈರು ಅಡ್ಡಬಿದ್ದಿದ್ದು, ಇದರಿಂದ ಕೃಷಿಕರು ನಷ್ಟ ಅನುಭವಿಸುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News