ನಟ ವಿಜಯ್ ಅಭಿಮಾನಿ ಸಂಘದ 50ಕ್ಕೂ ಅಧಿಕ ಸದಸ್ಯರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು
ಚೆನ್ನೈ:ನಟ ವಿಜಯ್ ತನ್ನ ರಾಜಕೀಯ ಆಕಾಂಕ್ಷೆಗಳ ಬಗ್ಗೆ ಮೌನ ಮುಂದುವರಿಸಿದ್ದರೂ ಅವರ ಅಭಿಮಾನಿಗಳ ಸಂಘದ ಸುಮಾರು 59 ಸದಸ್ಯರು ತಮಿಳುನಾಡು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಒಂಬತ್ತು ಜಿಲ್ಲೆಗಳ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತಎಣಿಕೆ ಮಂಗಳವಾರ ಹೊರಬರಲಾರಂಭಿಸಿದ್ದು, ದಳಪತಿ ವಿಜಯ್ ಮಕ್ಕಳ್ ಇಯಕ್ಕಂನ 59 ಅಭ್ಯರ್ಥಿಗಳು ವಿವಿಧ ಸ್ಥಳೀಯ ಸಂಸ್ಥೆಗಳ ಸ್ಥಾನಗಳಲ್ಲಿ ಗೆದ್ದಿದ್ದಾರೆ.
ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ 27,003 ಸ್ಥಾನಗಳಿಗೆ ಅಕ್ಟೋಬರ್ 6 ಹಾಗೂ 9 ರಂದು ಚುನಾವಣೆ ನಡೆದಿದ್ದು ಮಂಗಳವಾರ ಫಲಿತಾಂಶ ಪ್ರಕಟಿಸಲಾಯಿತು.
ಅಭಿಮಾನಿ ಸಂಘದ ಅಭ್ಯರ್ಥಿಗಳು ಕಾಂಚೀಪುರಂ, ಚೆಂಗಲ್ಪಟ್ಟು, ಕಲ್ಲಕುರಿಚಿ, ವಿಲ್ಲುಪುರಂ, ರಾಣಿಪೇಟೆ, ತಿರುಪತ್ತೂರು, ತೆಂಕಸಿ ಹಾಗೂ ತಿರುನಲ್ವೇಲಿಯಲ್ಲಿ ಗೆಲುವು ಸಾಧಿಸಿದರು. ಇಯಕ್ಕಂ ಪ್ರಕಾರ, ಅ. 12 ರಂದು ಮತ ಎಣಿಕೆ ಪೂರ್ಣಗೊಂಡಾಗ 13 ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದರು ಹಾಗೂ 46 ಸದಸ್ಯರು ಭಾರೀ ಮತಗಳ ಅಂತರದಿಂದ ಗೆದ್ದರು.