2ವರ್ಷದ ಮಕ್ಕಳಿಂದ 18ವರ್ಷದವರಿಗೆ ಕೋವಿಡ್ ಲಸಿಕೆ ನೀಡಲು ಸರಕಾರ ಸಿದ್ಧತೆ ಮಾಡಿಕೊಂಡಿದೆ: ಮುಖ್ಯಮಂತ್ರಿ ಬೊಮ್ಮಾಯಿ
ಉಡುಪಿ, ಅ.13: 2ರಿಂದ 18 ವರ್ಷ ಪ್ರಾಯದವರಿಗೆ ಕೋವಿಡ್ ವ್ಯಾಕ್ಸಿನ್ ನೀಡಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ರಾಜ್ಯ ಸರಕಾರ ಮಾಡಿಕೊಂಡಿದ್ದು, ಕೇಂದ್ರ ಸರಕಾರದ ಕೊನೆಯ ಸರ್ಟಿಫಿಕೇಶನ್ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಅದಮಾರುನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಮಕ್ಕಳ ಲಸಿಕೆ ಕೊನೆಯ ಸರ್ಟಿಫಿಕೇಶನ್ ನಿರೀಕ್ಷೆಯಲ್ಲಿದ್ದೇವೆ. ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರದ ಸರ್ಟಿಫಿಕೇಶನ್ ಬರಬೇಕಾಗಿದೆ ಎಂದರು. ರಾಜ್ಯದಲ್ಲಿ ಈಗಾಗಲೇ ಶೇ. 82 ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಶೇ. 90 ಮೊದಲ ಡೋಸ್ ಪೂರೈಸುತ್ತೇವೆ. ಎರಡನೇ ಡೋಸ್ ಡಿಸೆಂಬರ್ ಅಂತ್ಯದೊಳಗೆ ಶೇ. 70 ಪೂರ್ಣ ಮಾಡುವ ವಿಶ್ವಾಸವಿದೆ ಎಂದವರು ಹೇಳಿದರು.
ನಾವು 2 ರಿಂದ 18 ವರ್ಷದೊಳಗಿನ ಮಕ್ಕಳ ರಕ್ಷಣೆ ಮಾಡಬೇಕಾಗಿದೆ. ಅಂತಿಮ ನಿರ್ಧಾರ ಆದ ತಕ್ಷಣ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ಕೊಡುತ್ತೇವೆ ಎಂದರು.
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಇವಾಗಲೇ ಜಾರಿಯಲ್ಲಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಬಹಳಷ್ಟು ಚಿಂತನೆ ಮಾಡಿದ್ದೇವೆ. ಇದಕ್ಕಾಗಿ ಇತರ ರಾಜ್ಯಗಳ ಕಾನೂನು ಅಭ್ಯಾಸ ಮಾಡುತ್ತಿದ್ದೇವೆ. ಆದಷ್ಟು ಶೀಘ್ರ ಕಾನೂನು ತರಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ನಾಯಕರ ರಹಸ್ಯ ಮಾತುಕತೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದ್ದಾರೆ.