×
Ad

ನವೆಂಬರ್‌ನಿಂದ ಅಮೆರಿಕ ಗಡಿಗಳು ಮುಕ್ತ: ಅನಗತ್ಯ ಪ್ರವಾಸಗಳಿಗೂ ವಿದೇಶಿ ಪ್ರಯಾಣಿಕರಿಗೆ ಅನುಮತಿ

Update: 2021-10-13 22:23 IST

ವಾಶಿಂಗ್ಟನ್, ಅ.13: ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದಾಗಿ 19 ತಿಂಗಳುಗಳ ಕಾಲ ಹೇರಲಾಗಿದ್ದ ನಿರ್ಬಂಧಗಳನ್ನು ಒಂದೊಂದಾಗಿ ಸಡಿಲಿಸುತ್ತಿರುವ ಅಮೆರಿಕವು ಮುಂದಿನ ತಿಂಗಳಿನಿಂದ ಅತ್ಯಗತ್ಯವಲ್ಲದ ಪ್ರಯಾಣಗಳಿಗೂ ತನ್ನ ದೇಶದ ಗಡಿಯನ್ನು ತೆರೆದಿಡಲು ನಿರ್ಧರಿಸಿದೆ. ಆದರೆ ದೇಶವನ್ನು ಪ್ರವೇಶಿಸುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ಕೋವಿಡ್ 19 ಸೋಂಕು ನಿರೋಧಕ ಲಸಿಕೆಯನ್ನು ಪಡೆಯುವುದು ಕಡ್ಡಾಯವೆಂದು ಅದು ಸ್ಪಷ್ಟಪಡಿಸಿದೆ.

ಕೋವಿಡ್ 19 ಹಾವಳಿ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಅಮೆರಿಕ ಹಾಗೂ ಕೆನಡ ಮತ್ತು ಮೆಕ್ಸಿಕೊ ನಡುವಿನ ವಾಹನ, ರೈಲು ಹಾಗೂ ನೌಕಾಯಾನವನ್ನು ಕೇವಲ ವ್ಯಾಪಾರ ವಾಣಿಜ್ಯ ಸೇರಿದಂತೆ ಅಗತ್ಯ ಪ್ರಯಾಣಗಳಿಗೆ ಮಾತ್ರ ಅಮೆರಿಕವು ತೆರೆದಿಟ್ಟಿತ್ತು. ಆದರೆ ಬುಧವಾರ ಪ್ರಕಟಿಸಲಾದ ನೂತನ ನಿಯಮಾವಳಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದುಕೊಂಡ ವಿದೇಶಿ ಪ್ರಜೆಗಳು ಈ ವರ್ಷದ ನವೆಂಬರ್‌ನಿಂದ ಯಾವುದೇ ಕಾರಣವನ್ನು ನೀಡದೆಯೇ ಅಮೆರಿಕ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಮುಂದಿನ ವರ್ಷದ ಜನವರಿ ಮಧ್ಯದೊಳಗೆ ಟ್ರಕ್ ಚಾಲಕರಂತಹ ಅತ್ಯಗತ್ಯ ಸೇವೆಗಳ ಒದಗಿಸುವವರು ಕೂಡಾ ಅಮೆರಿಕ ಪ್ರವೇಶಿಸಲು ಪೂರ್ಣ ಪ್ರಮಾಣದ ಲಸಿಕೆ ಡೋಸ್‌ಗಳನ್ನು ಪಡೆದಿರಬೇಕು ಎಂದು ನೂತನ ನಿಯಮಾವಳಿಗಳಲ್ಲಿ ತಿಳಿಸಲಾಗಿದೆ.

 ಕೊರೋನ ಹಾವಳಿ ಬಳಿಕ ಅಮೆರಿಕವು ತನ್ನ ಗಡಿಗಳಿಗೆ ನಿರ್ಬಂಧಗಳನ್ನು ಹೇರಿದ ಪರಿಣಾಮವಾಗಿ ಪ್ರತ್ಯೇಕಗೊಂಡ ಕುಟುಂಬಗಳಿಗೆ ತಮ್ಮ ಬಂಧುಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಹಾಗೂ ರಜಾಕಾಲದ ವಿಹಾರಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗಡಿ ನಿರ್ಬಂಧಗಳನ್ನು ತೆರವುಗೊಳಿಸಬೇಕೆಂದು ನೆರೆಯ ರಾಷ್ಟ್ರಗಳಾದ ಕೆನಡ ಹಾಗೂ ಮೆಕ್ಸಿಕೊ ಅಮೆರಿಕವನ್ನು ಒತ್ತಾಯಿಸುತ್ತಾ ಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News