×
Ad

ಕರಾವಳಿಯಲ್ಲಿ ಭಾರೀ ಮಳೆ: 16 ಮನೆಗಳಿಗೆ, 104 ವಿದ್ಯುತ್ ಕಂಬಗಳಿಗೆ ಹಾನಿ

Update: 2021-10-13 22:26 IST

ಮಂಗಳೂರು, ಅ.13: ಅರಬ್ಬಿ ಸಮುದ್ರದಲ್ಲಿ ಕಂಡುಬಂದ ಹವಾಮಾನ ವೈಪರೀತ್ಯದಿಂದಾಗಿ ಕರಾವಳಿಯಲ್ಲಿ ಮಂಗಳವಾರ ನಿರಂತರವಾಗಿ ಮಳೆ ಸುರಿದಿದೆ. ದ.ಕ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿದಿದೆ. ಆದರೆ, ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಮಳೆ ಕ್ಷೀಣಿಸಿದ್ದರೂ ಮನೆ, ರಸ್ತೆ, ಕುಸಿದಿವೆ. ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು, ಸಾಕಷ್ಟು ಹಾನಿಯಾಗಿರುವುದಾಗಿ ವರದಿಯಾಗಿದೆ.

ಮಂಗಳವಾರ ರಾತ್ರಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 104 ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಐದು ವಿದ್ಯುತ್ ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್) ಹಾನಿಯಾಗಿವೆ. 16 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ ಮಂಗಳೂರು ತಾಲೂಕಿನಲ್ಲಿ ಆರು ಮನೆಗಳು ಭಾಗಶಃ ಹಾನಿಯಾಗಿವೆ. ಬಂಟ್ವಾಳ ತಾಲೂಕಿನಲ್ಲಿ ಮೂರು ಮನೆಗಳು ಸಂಪೂರ್ಣವಾಗಿ ಧರೆಗುರುಳಿದ್ದರೆ, ನಾಲ್ಕು ಮನೆಗಳು ಭಾಗಶಃ ಹಾನಿಯಾಗಿವೆ. ಬೆಳ್ತಂಗಡಿ ತಾಲೂಕಿನಲ್ಲಿ ಎರಡು ಮನೆಗಳು ಭಾಗಶಃ ಹಾನಿ, ಪುತ್ತೂರಿನಲ್ಲಿ ಒಂದು ಮನೆ ಭಾಗಶಃ ಹಾನಿಯಾಗಿದೆ.

212 ಹೆಕ್ಟೇರ್ ಬೆಳೆಹಾನಿ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯ ವಿವಿಧೆಡೆ ರಸ್ತೆ ಹಾನಿಗೊಂಡಿವೆ. ಎಲ್ಲವನ್ನೂ ಅಳತೆ ಮಾಡಿದ್ದಲ್ಲಿ ಸರಿಸುಮಾರು ಒಂದು ಕಿ.ಮೀ. 350 ಮೀಟರ್‌ನಷ್ಟು ಉದ್ದದ ರಸ್ತೆ ಹಾಳಾದಂತಾಗಿದೆ. ಜಿಲ್ಲೆಯಲ್ಲಿ ತೋಟಗಾರಿಕೆಗೆ ಸಂಬಂಧಪಟ್ಟಂತೆ 212 ಹೆಕ್ಟೇರ್ ಪ್ರದೇಶದ ಬೆಳೆಹಾನಿ ಸಂಭವಿಸಿದೆ.

ಮಳೆಯಿಂದಾಗಿ ಹಾನಿಯಾದ ಬಗ್ಗೆ ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಪ್ರಾಥಮಿಕ ವರದಿಯನ್ನು ಪಡೆದು ಸರಕಾರದಿಂದ ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಮಾರ್ಗಸೂಚಿ ಅನುಸಾರ ಪರಿಹಾರ ಪಾವತಿಗೆ ತಹಶೀಲ್ದಾರ್‌ರ ಹಂತದಲ್ಲಿ ಕ್ರಮ ವಹಿಸ ಲಾಗುತ್ತಿದೆ. ಜಿಲ್ಲೆಯಲ್ಲಿ ಮನೆಗಳಿಗೆ ಮಳೆನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಹಾನಿಯಾದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎನ್ನುವುದು ಜಿಲ್ಲಾಡಳಿತ ನೀಡಿದ ಅಂಕಿ-ಅಂಶದ ವರದಿಯಲ್ಲಿ ಉಲ್ಲೇಖಗೊಂಡಿದೆ.

ಧಾರಾಕಾರ ಮಳೆಗೆ ಮಂಗಳೂರಿನ ದೇರೆಬೈಲ್ ಸಮೀಪದ ಲ್ಯಾಂಡ್ ಲಿಂಕ್ಸ್ ಒಳ ರಸ್ತೆ ಕುಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೂರು ತಿಂಗಳ ಹಿಂದೆ ಇಲ್ಲಿ ಸಣ್ಣ ಗುಂಡಿಯೊಂದು ಕಾಣಿಸಿದ್ದು, ತಕ್ಷಣ ಸ್ಥಳೀಯರು ಜನಪ್ರತಿನಿಧಿಗಳ, ಅಧಿಕಾರಿಗಳ ಗಮನ ಸೆಳೆದಿದ್ದರು. ಅದರಂತೆ, ಮೇಯರ್ ಪ್ರೇಮಾನಂದ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ದುರಸ್ತಿ ಪಡಿಸದ ಕಾರಣ ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪೊಳಲಿ ಸಮೀಪ ನಿರ್ಮಾಣ ಹಂತದಲ್ಲಿದ್ದ ಎರಡಂತಸ್ತಿನ ಮನೆಯೊಂದು ಕುಸಿದು ಬಿದ್ದಿದೆ. ಎಡಪದವು ನಿವಾಸಿ ರಂಜಿತ್ ಎರಡು ವರ್ಷಗಳ ಹಿಂದೆ ಪೊಳಲಿಯ ಶ್ರೀ ಅಖಿಲೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಸಮೀಪ ನಿವೇಶನ ಖರೀದಿಸಿ ಮನೆ ನಿರ್ಮಿಸುವ ಕಾರ್ಯ ಆರಂಭಿಸಿದ್ದರು. ಎರಡು ಅಂತಸ್ತಿನ ಮನೆ ಇದಾಗಿದ್ದು, ಕಾಮಗಾರಿ ಅಂತಿಮ ಹಂತದಲ್ಲಿತ್ತು. ಮಂಗಳವಾರ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಕುಸಿತದ ವೇಳೆ ಮನೆಯಲ್ಲಿ ಯಾರೂ ಇಲ್ಲದೆ ಇದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಕಡಲು ಪ್ರಕ್ಷುಬ್ಧ: ಮಂಗಳವಾರ ರಾತ್ರಿ ಭರ್ಜರಿ ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ದಡಕ್ಕೆ ಬಡಿಯುತ್ತಿರುವುದರಿಂದ ಸಮೀಪದ ನಿವಾಸಿಗಳಲ್ಲಿ ಕಡಲ್ಕೊರೆತದ ಆತಂಕ ತೀವ್ರಗೊಂಡಿದೆ. ಉಳ್ಳಾಲ, ಸೋಮೇಶ್ವರ, ಸುರತ್ಕಲ್, ಪಣಂಬೂರು ಸೇರಿದಂತೆ ಕಡಲ ಕಿನಾರೆಯನ್ನು ಹಂಚಿಕೊಂಡ ಪ್ರದೇಶದಲ್ಲಿ ಅಲೆಗಳ ಆರ್ಭಟ ಕಂಡುಬಂದಿದೆ. ಕಡಲು ಮತ್ತಷ್ಟು ಪ್ರಕ್ಷುಬ್ಧಗೊಂಡಿದೆ.

ಡ್ಯಾಮ್‌ಗಳ ಒಳಹರಿವು ಹೆಚ್ಚಳ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ನದಿಗಳು ತುಂಬಿದ್ದು, ಡ್ಯಾಮ್‌ಗಳ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ತುಂಬೆ ಡ್ಯಾಮ್‌ನ ಒಳಹರಿವು 30,675 ಕ್ಯೂಸೆಕ್ಸ್ ಇದೆ. ಹೊರಹರಿವು ಶೂನ್ಯವಿದೆ. ಸದ್ಯ ತುಂಬೆ ಡ್ಯಾಮ್‌ನ ನೀರಿನಮಟ್ಟ 3.9 ಮೀಟರ್‌ಗೆ ತಲುಪಿದೆ. ಎಎಂಆರ್ ಡ್ಯಾಮ್‌ನಲ್ಲೂ 30,675 ಕ್ಯೂಸೆಕ್ಸ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಕ್ಷಣಾ ತಂಡ ಸನ್ನದ್ಧ: ಜಿಲ್ಲೆಯಲ್ಲಿ ಭಾರೀ ಮಳೆ ಸಂಭವಿಸಿ ಪ್ರವಾಹ ಉಂಟಾದರೆ ಅದನ್ನು ಸಮರ್ಥವಾಗಿ ಎದುರಿಸಲು ರಕ್ಷಣಾ ತಂಡಗಳು ಸರ್ವ ಸನ್ನದ್ಧಗೊಂಡಿವೆ. ಜಿಲ್ಲೆಯೊಂದರಲ್ಲೇ 40 ಎಸ್‌ಡಿಆರ್‌ಎಫ್ ತಂಡಗಳು, 20 ಎನ್‌ಡಿಆರ್‌ಎಫ್ ತಂಡಗಳು, 50 ಸಿವಿಲ್ ಡಿಫೆನ್ಸ್ ತಂಡಗಳು ರಕ್ಷಣಾ ಕಾರ್ಯಕ್ಕೆ ಸಜ್ಜುಗೊಂಡಿವೆ. ಅಲ್ಲದೆ, 16 ಬೋಟುಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News