ಅ.16ಕ್ಕೆ ದ.ಕ. ಜಿಲ್ಲಾಧಿಕಾರಿಯಿಂದ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ

Update: 2021-10-13 17:15 GMT

ಮಂಗಳೂರು, ಅ.13: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಇದೇ ಅ.16ರಂದು ಸುಳ್ಯ ತಾಲೂಕಿನ ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮಕ್ಕೆ ಭೇಟಿ ನೀಡಿ, ಅಂದು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಸರಕಾರದ ಜನಪರ ಯೋಜನೆಗಳನ್ನು ತಳಮಟ್ಟದಲ್ಲಿ ಜನಸಾಮಾನ್ಯರಿಗೆ ನೇರವಾಗಿ ಒದಗಿಸಬೇಕೆಂಬ ಆಶಯದಂತೆ ಜಿಲ್ಲೆಯ ಎಲ್ಲ ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರತೀ ತಿಂಗಳ 3ನೇ ಶನಿವಾರದಂದು ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ್ಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗ್ರಾಮ ಲೆಕ್ಕಾಧಿಕಾರಿಗಳು ಪ್ರತೀ ಮನೆಯ ಸರ್ವೇ ಮಾಡಿ, ಅಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿ ಅರ್ಜಿಗಳನ್ನು ಸ್ವೀಕರಿಸುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಆದಾಗ್ಯೂ ಸಾರ್ವಜನಿಕರು ನೇರವಾಗಿ ಆಹವಾಲುಗಳನ್ನು ನೀಡಲು ಇಚ್ಛಿಸಿದ್ದಲ್ಲಿ, ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಕ್ಕುಜಡ್ಕದಲ್ಲಿ ಅರ್ಜಿ ನೀಡಬಹುದಾಗಿದೆ.

ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ಅಂದು ಜಿಲ್ಲಾಧಿಕಾರಿ ಜೊತೆಗಿದ್ದು, ಸಮಸ್ಯೆಗಳನ್ನು ಆದಷ್ಟು ಸ್ಥಳದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಸಮಸ್ಯೆ ಸ್ಥಳದಲ್ಲೇ ಬಗೆಹರಿಯದಿದ್ದಲ್ಲಿ, ಮುಂದಿನ ಸೂಕ್ತವಾದ ದಿನವನ್ನು ನಿರ್ಧರಿಸಿ ಆ ಗ್ರಾಮದಲ್ಲಿಯೇ ಮತ್ತೊಮ್ಮೆ ಗ್ರಾಮ ವಾಸ್ತವ್ಯ ನಡೆಸಲು ನಿರ್ಧರಿಸಲಾಗುವುದು. ಈ ಸಮಯದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ಸಮಚಿತ ವರ್ತನಗಳನ್ನು ಪಾಲನೆ ಮಾಡುವಂತೆ ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ, ಹೆಚ್ಚಿನ ಮಾಹಿತಿಯನ್ನು ಸುಳ್ಯ ತಾಲೂಕು ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News