ಕತರ್‌ನಲ್ಲಿ ಅಮೆರಿಕ-ಇಯು ನಿಯೋಗದ ಜೊತೆ ತಾಲಿಬಾನ್ ಮಾತುಕತೆ

Update: 2021-10-13 18:10 GMT

   ಹೊಸದಿಲ್ಲಿ,ಅ.13: ಅಮೆರಿಕ-ಯುರೋಪ್ ಒಕ್ಕೂಟದ ಜಂಟಿ ನಿಯೋಗದ ಜೊತೆ ತಾಲಿಬಾನ್ ಮೊದಲ ಬಾರಿಗೆ ಮಂಗಳವಾರ ಕತರ್ ರಾಜಧಾನಿ ದೋಹಾದಲ್ಲಿ ಮಾತುಕತೆ ನಡೆಸಿದೆ. ಈ ಮಧ್ಯೆ ಯುರೋಪ್ ಒಕ್ಕೂಟವು ಅಫ್ಘಾನ್‌ಗೆ 1.2 ಶತಕೋಟಿ ಡಾಲರ್‌ಗಳ ಮಾನವೀಯ ನೆರವಿನ ಕೊಡುಗೆಯನ್ನು ನೀಡಿದೆ.

  20 ವರ್ಷಗಳ ದೀರ್ಘ ಸಂಘರ್ಷದ ಬಳಿಕ ಅಮೆರಿಕ ನೇತೃತ್ವದ ಮೈತ್ರಿಪಡೆಗಳು ಅಫ್ಘಾನಿಸ್ತಾನದಿಂದ ಹಿಂದೆ ಸರಿದ ಬಳಿಕ ಅಧಿಕಾರಕ್ಕೇರಿದ ತಾಲಿಬಾನ್ ಆಡಳಿತವು ತನಗೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಬಯಸುತ್ತಿದೆ ಹಾಗೂ ಮಾನವೀಯ ದುರಂತಗಳಿಂದ ಪಾರಾಗಲು ಆರ್ಥಿಕ ನೆರವನ್ನು ಕೋರುತ್ತಿದೆ.

   ಇದಕ್ಕೂ ಮುನ್ನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೆರಸ್ ಬರಗಾಲ ಹಾಗೂ ಬಡತನದಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ ಉದಾರವಾದ ದೇಣಿಗೆಯನ್ನು ನೀಡುವಂತೆ ಅವರು ಜಗತ್ತಿನಾದ್ಯಂತದ ರಾಷ್ಟ್ರಗಳಿಗೆ ಕರೆ ನೀಡಿದ್ದರು. ಇದೇ ವೇಳೆ ಅವರು .ತಾಲಿಬಾನ್ ಆಡಳಿತವು ಅಫ್ಘಾನ್ ಮಹಿಳೆಯರು ಮತ್ತು ಹಕ್ಕುಗಳನ್ನು ರಕ್ಷಿಸುವ ಬಗ್ಗೆ ನೀಡಿರುವ ಭರವಸೆಯನ್ನು ಮುರಿದಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದರು.

 ಅಫ್ಘಾನಿಸ್ತಾನದಲ್ಲಿ ಭೀಕರವವಾದ ಮಾನವೀಯ ಹಾಗೂ ಸಾಮಾಜಿಕ-ಆರ್ಥಿಕ ಪತನವುಂಟಾಗುವುದನ್ನು ತಪ್ಪಿಸಲು ಯುರೋಪ್ ಒಕ್ಕೂಟವು ನೆರವು ಪ್ಯಾಕೇಜ್ ಅನ್ನು ಘೋಷಿಸಿದೆ.ಇಟಲಿಯ ಆತಿಥ್ಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಜಿ20 ಶೃಂಗಸಭೆಯಲ್ಲಿ ಯುರೋಪಿಯನ್ ಕಮೀಶನ್‌ನ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲಿಯೆನ್ ಅವರು ಈ ಘೋಷಣೆ ಮಾಡಿದ್ದಾರೆ.

ಅಫ್ಘನ್ನರಿಗೆ ನೇರವಾಗಿ ಬೆಂಬಲ ನೀಡಲು ಹಾಗೂ ಅಫ್ಘಾನಿಸ್ತಾನದಲ್ಲಿ ಮಾನವೀಯ ನೆರವಿನ ಕಾರ್ಯಾಚರಣೆಯಲ್ಲಿ ತೊಡಗಿರುವ ಅಂತಾರಾಷ್ಟ್ರೀಯ ಸಂಘಟನೆಗಳಿಗಾಗಿ ನೀಡಲಾಗುತ್ತಿದೆಯೇ ಹೊರತು ತಾಲಿಬಾನ್‌ನ ಮಧ್ಯಂತರ ಸರಕಾರಕ್ಕಲ್ಲವೆಂದು ಡೆರ್‌ಲಿಯೆನ್ ಸ್ಪಷ್ಟಪಡಿಸಿದರು. ಅಫ್ಘಾನಿಸ್ತಾನದ ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಲು ಯುರೋಪ್ ಒಕ್ಕೂಟವು ನಿರಾಕರಿಸಿದೆ.

 ತಾಲಿಬಾನ್ ಅಧಿಕಾರಿಗಳ ಜೊತೆ ಯಾವುದೇ ಮಾತುಕತೆ ನಡೆಸಲು ರೂಪಿಸಲಾದ ಪೂರ್ವಶರತ್ತುಗಳ ಬಗ್ಗೆ ಯುರೋಪ್ ಒಕ್ಕೂಟವು ಸ್ಪಷ್ಟತೆಯನ್ನು ಹೊಂದಿದೆ ಎಂದವರು ಹೇಳಿದರು. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವುದನ್ನು ಅಲ್ಲಿಂದ ಬರುತ್ತಿರುವ ವರದಿಗಳೇ ಹೇಳುತ್ತಿವೆ. ಆದರೆ ತಾಲಿಬಾನ್‌ನ ಕೃತ್ಯಗಳಿಗಾಗಿ ಅಫ್ಘಾನಿಸ್ತಾನದ ಜನತೆ ಬೆಲೆ ತೆರಬಾರದೆಂಬುದೇ ಯುರೋಪ್ ಒಕ್ಕೂಟದ ಆಶಯವಾಗಿದೆ ಎಂದು ಡೆರ್ ಲಿಯೆನ್ ಹೇಳಿದರು.

ತಾಲಿಬಾನ್ ಆಡಳಿತದ ಬಳಿಕ ಅಫ್ಘಾನಿಸ್ತಾನಕ್ಕೆ ವಿದೇಶಿ ನೆರವು ಬಹುತೇಕ ಕಡಿತಗೊಂಡಿದ್ದು, ಆ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಚಳಿಗಾಲ ಸಮೀಪಿಸುತ್ತಿದ್ದಂತೆಯೇ ಆಹಾರ ವಸ್ತುಗಳ ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆ ಉಲ್ಬಣಿಸಲಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆಯೆಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News