ಬಿಲ್ಲು ಬಾಣದಿಂದ ದಾಳಿ ಮಾಡಿ ಐವರ ಹತ್ಯೆ

Update: 2021-10-14 05:19 GMT

ಓಸ್ಲೊ: ಬಿಲ್ಲು ಬಾಣಗಳನ್ನು ಅಸ್ತ್ರವಾಗಿ ಬಳಸಿಕೊಂಡು ದುಷ್ಕರ್ಮಿಯೋರ್ವ ಐದು ಮಂದಿಯನ್ನು ಹತ್ಯೆ ಮಾಡಿರುವ ಅಪರೂಪದ ಘಟನೆ ನಾರ್ವೆಯ ಕೊಂಗ್ಸ್‌ಬರ್ ಎಂಬಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. "ಆರೋಪಿ ಕೆಲ ದಾಳಿಗಳಿಗೆ ಬಿಲ್ಲು ಹಾಗೂ ಬಾಣವನ್ನು ಅಸ್ತ್ರವಾಗಿ ಬಳಸಿದ್ದಾನೆ" ಎಂದು ಪೊಲೀಸ್ ಮುಖ್ಯಸ್ಥ ಓಯಿವಿಂದ್ ಆಸ್ ಹೇಳಿದ್ದಾರೆ. ಇತರ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಆರೋಪಿಯನ್ನು ಬಂಧಿಸಲಾಗಿದ್ದು, ಈಗ ಲಭ್ಯವಿರುವ ಮಾಹಿತಿ ಪ್ರಕಾರ, ಏಕಾಂಗಿಯಾಗಿ ಈ ದಾಳಿ ನಡೆಸಿದ್ದಾನೆ" ಎಂದು ಅವರು ವಿವರಿಸಿದರು. ಗಾಯಗೊಂಡವರಲ್ಲಿ ಕರ್ತವ್ಯದಲ್ಲಿ ಇರದ ಒಬ್ಬ ಪೊಲೀಸ್ ಅಧಿಕಾರಿ ಕೂಡಾ ಸೇರಿದ್ದಾರೆ. ಬಾಣಗಳು ಕಟ್ಟಡದ ಮರದ ಪ್ಯಾನಲ್‌ಗಳಿಗೆ ನಾಟಿರುವ ಚಿತ್ರಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಕೊಂಗ್ಸ್‌ಬರ್ಗ್‌ನಲ್ಲಿ ರಾತ್ರಿ ನಡೆದ ಘಟನೆ ಭಯಾನಕ ಎಂದು ಪ್ರಧಾನಿ ಎರ್ನಾ ಸೊಲ್ಬೆರಾ ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದರು. ರಾಜಧಾನಿ ಓಸ್ಲೋದಿಂದ 68 ಕಿಲೋಮೀಟರ್ ದೂರದ ಕೊಂಗ್ಸ್‌ಬರ್ಗ್ ಎಂಬಲ್ಲಿ ದಾಳಿ ನಡೆದಿದೆ. ಜನ ಭೀತರಾಗಿದ್ದಾರೆ. ಆದರೆ ಇದೀಗ ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿದೆ ಎನ್ನುವುದು ಗಮನಾರ್ಹ ಎಂದು ಅವರು ಹೇಳಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳು ಬಂದೂಕು ಹೊಂದುವುದನ್ನು ಕಡ್ಡಾಯಪಡಿಸಿ ಪೊಲೀಸ್ ನಿರ್ದೇಶನಾಲಯ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News