ಅತ್ಯಂತ ಮೇಲ್ ಸ್ತರದಲ್ಲಿ ಬ್ರಾಹ್ಮಣರ ಜೀವನ ಮಟ್ಟ: ಉಳಿದ ಜಾತಿಗಳಿಗಿಂತ ತಲಾದಾಯ 3 ಪಟ್ಟು ಅಧಿಕ
►ಶಿಕ್ಷಣ, ಮೂಲಸೌಕರ್ಯಗಳಲ್ಲೂ ಅಗ್ರಸ್ಥಾನ
►‘ಬ್ರಾಹ್ಮಣರ ತುಷ್ಟೀಕರಣ’ದಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ: ಆತಂಕ
►‘ಸೆಂಟರ್ ಫಾರ್ ಇಕಾನಮಿಕ್ ಡಾಟಾ ಆ್ಯಂಡ್ ಅನಾಲಿಸಿಸ್’ನಲ್ಲಿ ಪ್ರಬಂಧ ಪ್ರಕಟ
ಹೊಸದಿಲ್ಲಿ : ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಬ್ರಾಹ್ಮಣರಿಗಾಗಿ ದಕ್ಷಿಣ ಭಾರತದ ಮೂರು ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಹಲವು ವಿಶೇಷ ಸೌಲಭ್ಯ ಯೋಜನೆಗಳನ್ನು ಪ್ರಕಟಿಸಿವೆ. ಬ್ರಾಹ್ಮಣ ಸಮುದಾಯದ ಬಡ ಜನರನ್ನು ಅಭಿವೃದ್ಧಿಯ ಕಡೆಗೆ ನಡೆಸುವುದು ಈ ಯೋಜನೆಗಳ ಉದ್ದೇಶವಾಗಿದೆ. ಆದರೆ, ಸಂಶೋಧನಾ ಪ್ರಬಂಧವೊಂದು, ಈ ಮೂರು ರಾಜ್ಯಗಳಲ್ಲಿ ಉಳಿದೆಲ್ಲ ಜಾತಿಗಳಿಗಿಂತ ಬ್ರಾಹ್ಮಣರ ಜೀವನ ಮಟ್ಟ ಮೇಲ್‌ಸ್ತರದಲ್ಲಿದೆ ಎನ್ನುವುದನ್ನು ಬಹಿರಂಗಪಡಿಸಿದೆ.
ಅಶೋಕಾ ವಿವಿಯ ಅರ್ಥಶಾಸ್ತ್ರದ ಪ್ರೊಫೆಸರ್ ಅಶ್ವಿನಿ ದೇಶಪಾಂಡೆ ಹಾಗೂ ಹೆಡಲ್ ಬರ್ಗ್ ವಿವಿಯ ಸಂಶೋಧಕ ರಾಜೇಶ್ ರಾಮಚಂದ್ರನ್ ಅವರು ಇತ್ತೀಚೆಗೆ ಮಂಡಿಸಿದ, ‘ಸೆಂಟರ್ ಫಾರ್ ಇಕಾನಮಿಕ್ ಡಾಟಾ ಅಂಡ್ ಅನಾಲಿಸಿಸ್’ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧದಲ್ಲಿ ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅದರಲ್ಲಿ ಈ ನಾಲ್ಕು ರಾಜ್ಯಗಳಲ್ಲಿ ಬ್ರಾಹ್ಮಣರನ್ನು ಬ್ರಾಹ್ಮಣೇತರ ಹಿಂದೂಗಳು, ಒಬಿಸಿಗಳು, ಎಸ್ಸಿ-ಎಸ್ಟಿಗಳು ಹಾಗೂ ಮೇಲ್ಜಾತಿಯ ಮುಸ್ಲಿಮರ ಜೀವನಮಟ್ಟದೊಂದಿಗೆ ಹೋಲಿಕೆ ಮಾಡಲಾಗಿದೆ. ಈ ಮೂರು ರಾಜ್ಯಗಳಲ್ಲಿಯೂ ಬ್ರಾಹ್ಮಣರು ಸಂಪನ್ಮೂಲಗಳಲ್ಲಿ, ಜೀವನಮಟ್ಟದ ವಿವಿಧ ಸೂಚ್ಯಂಕಗಳಲ್ಲಿ, ಉತ್ತಮ ರಾಜಕೀಯ ಹಾಗೂ ಸಾಮಾಜಿಕ ಸಂಪರ್ಕಗಳಲ್ಲಿ ಇತರ ಸಾಮಾಜಿಕ ಪಂಗಡಗಳಿಗಿಂತ ಹೆಚ್ಚು ಉತ್ತಮ ಸ್ಥಾನವನ್ನು ಹೊಂದಿದ್ದಾರೆ ಎಂದು ಹೇಳಿದೆ.
ಶಿಕ್ಷಣ ಕ್ಷೇತ್ರ: ಮಾನವ ಬಂಡವಾಳ (ಹ್ಯೂಮನ್ ಕ್ಯಾಪಿಟಲ್) ಸೂಚ್ಯಂಕಗಳಾದ ಓರ್ವ ವ್ಯಕ್ತಿಯು ಶಾಲಾ ಶಿಕ್ಷಣ ಪಡೆದ ವರ್ಷಗಳು, 12 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳವರೆಗಿನ ಶಾಲಾ ಶಿಕ್ಷಣ , ಸಾಕ್ಷರತೆ, ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಇವುಗಳೆಲ್ಲದರಲ್ಲಿಯೂ ಬ್ರಾಹ್ಮಣರು ಉಳಿದ ಸಮುದಾಯಗಳವರಿಗಿಂತ ಸ್ಪಷ್ಟವಾಗಿ ಮೇಲುಗೈ ಹೊಂದಿದ್ದಾರೆ. ಬ್ರಾಹ್ಮಣೇತರ ಮೇಲ್ಜಾತಿ ಹಿಂದೂಗಳು, ಒಬಿಸಿ ಹಿಂದೂಗಳು, ಎಸ್‌ಸಿ-ಎಸ್ಟಿಗಳು ಹಾಗೂ ಮೇಲ್ಜಾತಿಯ ಮುಸ್ಲಿಮರು ಆನಂತರದ ಸ್ಥಾನಗಳಲ್ಲಿದ್ದಾರೆ ಎಂದು ವರದಿ ಹೇಳುತ್ತದೆ.
ಶೇಕಡವಾರು ಪ್ರಮಾಣದಲ್ಲಿ ಹೇಳುವುದಾದರೆ ಶೇ.41ರಷ್ಟು ಬ್ರಾಹ್ಮಣರು 12 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಶಾಲಾ ಶಿಕ್ಷಣ ಪಡೆದಿದ್ದಾರೆ ಹಾಗೂ ಶೇ.97 ಮಂದಿ ಸಾಕ್ಷರರಾಗಿದ್ದಾರೆ. ಎಸ್‌ಸಿ-ಎಸ್‌ಟಿ ಪಂಗಡಗಳವರು ಸರಾಸರಿಯಾಗಿ 4.7 ವರ್ಷಗಳ ಶಾಲಾ ಶಿಕ್ಷಣ ಪಡೆದಿದ್ದರೆ, ಅವರಲ್ಲಿ ಶೇ.13 ಮಂದಿ 12 ವರ್ಷಗಳ ಶಾಲಾ ಶಿಕ್ಷಣ ಪಡೆದಿದ್ದಾರೆ ಮತ್ತು ಶೇ.53 ಮಂದಿ ಸಾಕ್ಷರರಾಗಿದ್ದಾರೆ. ಹೀಗೆ ಎಸ್‌ಸಿ-ಎಸ್‌ಟಿಗೆ ಹೋಲಿಸಿದರೆ ಬ್ರಾಹ್ಮಣರು ಎರಡು ಪಟ್ಟು ಹೆಚ್ಚು ವರ್ಷಗಳ ಕಾಲ ಶಾಲಾ ಶಿಕ್ಷಣ ಪಡೆದಿದ್ದಾರೆ ಹಾಗೂ ಶೇ.64ರಷ್ಟು ಅಧಿಕ ಮಂದಿ ಸಾಕ್ಷರರಾಗಿದ್ದಾರೆ. ಬ್ರಾಹ್ಮಣೇತರ ಮೇಲ್ಜಾತಿ ಹಿಂದೂಗಳಿಗೆ ಹೋಲಿಸಿದರೂ ಬ್ರಾಹ್ಮಣರು ಸರಾಸರಿ ಎರಡು ವರ್ಷಗಳಿಗಿಂತ ಅಧಿಕ ಅವಧಿಯ ಶಾಲಾ ಶಿಕ್ಷಣ ಪಡೆದಿದ್ದಾರೆ ಹಾಗೂ ಅವರು 12 ವರ್ಷಗಳ ಶಾಲಾ ಶಿಕ್ಷಣ ಪಡೆದಿರುವ ಸಾಧ್ಯತೆ ಶೇ.1.78 ಪಟ್ಟು ಅಧಿಕವಾಗಿದೆ ಹಾಗೂ ಸಾಕ್ಷರರಾಗಿರುವ ಸಾಧ್ಯತೆ ಶೇ.18ರಷ್ಟು ಅಧಿಕವಾಗಿದೆ ಎಂದು ಸಂಶೋಧನೆ ಹೇಳಿದೆ.
ಉದ್ಯೋಗಾವಕಾಶಗಳ ಲಭ್ಯತೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಇಂಗ್ಲಿಷ್ ಭಾಷಾ ಪಾಂಡಿತ್ಯದಲ್ಲಿಯೂ ಬ್ರಾಹ್ಮಣರು ಇತರ ಸಮುದಾಯಗಳಿಗಿಂತ ಮುಂಚೂಣಿ ಯಲ್ಲಿದ್ದಾರೆ. ಆ ಸಮುದಾಯದ ಶೇ.22 ರಷ್ಟು ಮಂದಿ ಅಸ್ಖಲಿತವಾಗಿ ಇಂಗ್ಲಿಷ್ ಮಾತನಾಡಬಲ್ಲರು ಹಾಗೂ ಶೇ.63 ಮಂದಿ ಇಂಗ್ಲಿಷ್ ಬಲ್ಲರು. ಆದರೆ ಈ ಸಂಖ್ಯೆ ಬ್ರಾಹ್ಮಣೇತರ ಮೇಲ್ಜಾತಿ ಹಿಂದೂಗಳಲ್ಲಿ ಕ್ರಮವಾಗಿ ಶೇ.9 ಹಾಗೂ ಶೇ.33, ಎಸ್‌ಸಿ-ಎಸ್‌ಟಿಗಳಲ್ಲಿ ಕ್ರಮವಾಗಿ ಶೇ.4 ಹಾಗೂ ಶೇ.21 ಆಗಿದೆ.
ಬ್ರಾಹ್ಮಣರ ತಲಾದಾಯ 3 ಪಟ್ಟು ಅಧಿಕ
ಜೀವನಮಟ್ಟದಲ್ಲಿಯೂ ಬ್ರಾಹ್ಮಣರು ಇತರ ಸಾಮಾಜಿಕ ಪಂಗಡಗಳಿಂತ ಬಹಳಷ್ಟು ಮುಂದಿದ್ದಾರೆ. ತಲಾದಾಯ ಕೆಳಗಿನಂತಿದೆ.
ಬ್ರಾಹ್ಮಣರು 58,200 ರೂ., ಬ್ರಾಹ್ಮಣೇತರ ಮೇಲ್ಜಾತಿ ಹಿಂದೂಗಳು 24,700, ಒಬಿಸಿಗಳು 22,600, ಎಸ್‌ಸಿ-ಎಸ್‌ಟಿ 19,400 ಹಾಗೂ ಮೇಲ್ಜಾತಿ ಮುಸ್ಲಿಮರ ಸರಾಸರಿ ತಲಾ ಆದಾಯವು 21,200 ರೂ. ಆಗಿದೆ. ಬ್ರಾಹ್ಮಣೇತರ ಮೇಲ್ಜಾತಿ ಹಿಂದೂಗಳು, ಎಸ್‌ಸಿ-ಎಸ್‌ಟಿಗಳಿಗಿಂತ ಬ್ರಾಹ್ಮಣರ ತಲಾವಾರು ಆದಾಯವು 2.35ರಿಂದ 3 ಪಟ್ಟು ಅಧಿಕವಾಗಿದೆ.
ಶೇ.30ರಷ್ಟು ಬ್ರಾಹ್ಮಣರು ವೃತ್ತಿಪರ ಉದ್ಯೋಗವನ್ನು ಹೊಂದಿದ್ದರೆ, ಈ ಸಂಖ್ಯೆ ಬ್ರಾಹ್ಮಣೇತರ ಮೇಲ್ಜಾತಿ ಹಿಂದೂಗಳು, ಒಬಿಸಿಗಳು, ಎಸ್‌ಸಿ-ಎಸ್‌ಟಿ ಹಾಗೂ ಮೇಲ್ಜಾತಿಯ ಮುಸ್ಲಿಮರಲ್ಲಿ ಕ್ರಮವಾಗಿ ಶೇ.12,ಶೇ. 8, ಶೇ.6 ಹಾಗೂ ಶೇ. 3 ಆಗಿದೆ.
ಮೂಲಸೌಕರ್ಯದಲ್ಲೂ ಅಗ್ರಸ್ಥಾನ
ಮೂಲಸೌಕರ್ಯಗಳ ಲಭ್ಯತೆಯಲ್ಲೂ ಬ್ರಾಹ್ಮಣರಿಗೂ, ಇತರ ಪಂಗಡಗಳಿಗೂ ಅಜಗಜಾಂತರವಿದೆ. ಶೇ.85ರಷ್ಟು ಬ್ರಾಹ್ಮಣ ಕುಟುಂಬಗಳು ಶೌಚಾಲಯ ಸೌಕರ್ಯವನ್ನು ಹೊಂದಿದ್ದರೆ, ಬ್ರಾಹ್ಮಣೇತರ ಮೇಲ್ಜಾತಿ ಹಿಂದೂಗಳು, ಒಬಿಸಿಗಳು, ಎಸ್‌ಸಿ-ಎಸ್‌ಟಿ ಹಾಗೂ ಮೇಲ್ಜಾತಿ ಮುಸ್ಲಿಮರಲ್ಲಿ ಅದು ಕ್ರಮವಾಗಿ ಶೇ.63, ಶೇ.59, ಶೇ.39 ಹಾಗೂ ಶೇ.57 ಆಗಿದೆ.
ಸಾಮಾಜಿಕ- ಆರ್ಥಿಕ ಸೂಚಕಗಳಲ್ಲಿ ಜಾತಿ ಅಸಮಾನತೆಯು ವ್ಯಾಪಕವಾಗಿದ್ದು, ಬ್ರಾಹ್ಮಣರು ಈ ಮೂರು ರಾಜ್ಯಗಳಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿರುವುದು ಸಂಶೋಧನಾ ವರದಿ ಹೇಳುತ್ತದೆ.
12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಅವಧಿಯ ಶಾಲಾ ಶಿಕ್ಷಣವನ್ನು ಪಡೆದ ಬ್ರಾಹ್ಮಣರ ಸಂಖ್ಯೆಯು ಕ್ರಮವಾಗಿ ಬ್ರಾಹ್ಮಣೇತರ ಮೇಲ್ಜಾತಿ ಹಿಂದೂಗಳು, ಎಸ್‌ಸಿ-ಎಸ್‌ಟಿ ಹಾಗೂ ಮೇಲ್ಜಾತಿ ಮುಸ್ಲಿಮರಿಗಿಂತ ಕ್ರಮವಾಗಿ ಶೇ. 10, ಶೇ.14 ಹಾಗೂ ಶೇ.21 ಆಗಿದೆ ಮತ್ತು ಬ್ರಾಹ್ಮಣರ ತಲಾವಾರು ಆದಾಯವು ಬ್ರಾಹ್ಮಣೇತರ ಮೇಲ್ಜಾತಿ ಹಿಂದೂಗಳು ಹಾಗೂ ಎಸ್‌ಸಿ-ಎಸ್‌ಟಿಗಳಿಗಿಂತ ಕ್ರಮವಾಗಿ 8,200 ರೂ. ಹಾಗೂ 5,400 ರೂ. ಅಧಿಕವಾಗಿದೆ.
ಬಡ ಬ್ರಾಹ್ಮಣರು ಸರಾಸರಿ 6.83 ವರ್ಷಗಳ ಶಾಲಾ ಶಿಕ್ಷಣ ಪಡೆದಿದ್ದರೆ, ಅವರಲ್ಲಿ ಶೇ.17ರಷ್ಟು ಮಂದಿ 12 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ ಮತ್ತು ಶೇ.77ರಷ್ಟು ಮಂದಿ ಸಾಕ್ಷರರಾಗಿದ್ದಾರೆ.
ಈ ಎಲ್ಲಾ ಅಂಕಿ-ಅಂಶಗಳು, ಆದಾಯ, ಖರೀದಿ ಸಾಮರ್ಥ್ಯ, ಉದ್ಯೋಗ, ಶೌಚಾಲಯ ಹಾಗೂ ಭೂಮಿಯ ಲಭ್ಯತೆ ಈ ಎಲ್ಲಾ ಮಾನದಂಡಗಳಲ್ಲಿ ಸಮಾಜದ ಉಳಿದ ನಾಲ್ಕು ಪಂಗಡಗಳಿಗಿಂತಲೂ ಅಗ್ರಸ್ಥಾನದಲ್ಲಿದ್ದಾರೆ. ಇದಕ್ಕಿಂತಲೂ ಹೆಚ್ಚಾಗಿ ಈ ವಾಸ್ತವತೆಯು ಕೇವಲ ಕರ್ನಾಟಕ ಹಾಗೂ ಆಂಧ್ರ ರಾಜ್ಯಗಳಿಗಷ್ಟೇ ಸೀಮಿತವಾಗಿಲ್ಲ, ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಹೀಗಾಗಿ ಯಾವುದೇ ಸಾಮರ್ಥ್ಯದಲ್ಲಿ ಅಥವಾ ಜೀವನಾವಕಾಶಗಳ ಲಭ್ಯತೆಯಲ್ಲಿ ಬ್ರಾಹ್ಮಣರನ್ನು ದುರ್ಬಲ ಸಮುದಾಯವೆಂದು ಪರಿಗಣಿಸಲು ಎಂದಿಗೂ ಸಾಧ್ಯವಿಲ್ಲ ಎಂದು ವರದಿ ಹೇಳುತ್ತದೆ.
ಸಂವಿಧಾನದ ದೂರದರ್ಶಿತ್ವದ ಉಲ್ಲಂಘನೆ
ರಾಷ್ಟ್ರೀಯ ಜನಗಣತಿಯೊಂದಿಗೆ ಜಾತಿಗಣತಿಯನ್ನು ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಈ ಸಮಯ ದಲ್ಲಿ ಎಸ್‌ಸಿ-ಎಸ್‌ಟಿಗೆ ಹೊರತಾದ ಸಮು ದಾಯವನ್ನು ಈ ರಾಜ್ಯಗಳು ಗುರುತಿಸಿ, ಅವುಗಳಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವುದರಿಂದ ಜಾತಿ ತಾರತಮ್ಯ ದೂರವಾಗುವ ಬದಲು ಇನ್ನಷ್ಟು ಬಲವಾಗುವ ಅಪಾಯವಿದೆ ಎಂದು ಸಂಶೊೀಧನಾ ವರದಿ ಅಭಿಪ್ರಾಯ ಪಡುತ್ತದೆ.
ಈಗಾಗಲೇ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಉನ್ನತ ಸ್ಥಾನವನ್ನು ಹೊಂದಿರುವ ಸಮುದಾಯಕ್ಕೆ ಹೆಚ್ಚುವರಿ ಸವಲತ್ತುಗಳನ್ನು ಒದಗಿಸುವುದು ಜಾತಿ ಆಧಾರಿತ ತಾರತಮ್ಯಗಳನ್ನು ಕಡಿಮೆಗೊಳಿಸಬೇಕೆಂಬ ಸಂವಿಧಾನದ ದೂರದರ್ಶಿತ್ವದ ಉಲ್ಲಂಘನೆಯಾಗಿದೆ. ವೈದಿಕ ಶಿಕ್ಷಣದಂತಹ ಕೆಲವು ನಿರ್ದಿಷ್ಟ ಬಗೆಯ ತರಬೇತಿಗಳನ್ನು ವಿಶೇಷವಾಗಿ ಬ್ರಾಹ್ಮಣ ಸಮುದಾಯಕ್ಕೆ ನೀಡಹೊರಟಿರುವುದು, ಭವಿಷ್ಯದ ಜೀವನಾವಕಾಶಗಳನ್ನು ವ್ಯಕ್ತಿಯ ಹುಟ್ಟಿನಿಂದ ನಿರ್ಣಯಿಸುವ ವರ್ಣಾಶ್ರಮ ವ್ಯವಸ್ಥೆಯ ಮೂಲಕ ನಡೆಯುತ್ತಿರುವ ಅನ್ಯಾಯಕ್ಕೆ ಇನ್ನಷ್ಟು ಕುಮ್ಮಕ್ಕು ನೀಡಿದಂತಾಗುತ್ತದೆ. ನಾಲ್ಕನೆಯದಾಗಿ ಈ ನೀತಿಗಳ ಪ್ರಯೋಜನವನ್ನು ಪಡೆಯಲು ಬಯಸುವ ಬ್ರಾಹ್ಮಣರಿಗೆ ಈ ಮೂರು ರಾಜ್ಯ ಸರಕಾರಗಳು ಜಾತಿ ಪ್ರಮಾಣಪತ್ರಗಳನ್ನು ನೀಡುತ್ತಿರುವುದು ಕೂಡಾ ಅಸುಂಜಸವಾಗಿದೆ ಎಂದು ವರದಿ ಹೇಳಿದೆ.
ಶೇ. 55ರಷ್ಟು ಬ್ರಾಹ್ಮಣ ಕುಟುಂಬಗಳಿಂದ ಅಸ್ಪೃಶ್ಯತೆಯ ಆಚರಣೆ
ಶೇ.55ರಷ್ಟು ಬ್ರಾಹ್ಮಣ ಕುಟುಂಬಗಳು ತಾವು ಒಂದು ಬಗೆಯ ಅಸ್ಪೃಶ್ಯತೆಯ ಆಚರಣೆಯನ್ನು ಪಾಲಿಸುತ್ತಿರುವುದಾಗಿ ವರದಿ ಹೇಳಿದೆ. ಶೇ.22ರಷ್ಟು ಎಸ್‌ಸಿ-ಎಸ್‌ಟಿ ಕುಟುಂಬಗಳು, ತಾವು ಕಳೆದ ಐದು ವರ್ಷಗಳಲ್ಲಿ ತಮ್ಮ ಕೆಲವು ಸದಸ್ಯರಿಗೆ ಅಸ್ಪೃಶ್ಯತೆಯ ಕಹಿ ಅನುಭವವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಬ್ರಾಹ್ಮಣ ಕುಟುಂಬಗಳು ತಮ್ಮ ಜಾತಿ, ಸಮುದಾಯದೊಳಗೆ ಹಾಗೂ ಹೊರಗೆ ಮೇಲ್ಮಟ್ಟದ ರಾಜಕೀಯ ಹಾಗೂ ಸಾಮಾಜಿಕ ಸಂಪರ್ಕವನ್ನು ಹೊಂದಿರುವ ಸಾಧ್ಯತೆಗಳು ಅಧಿಕವಾಗಿರುತ್ತವೆ ಎಂದು ಈ ಸಂಶೋಧನಾ ವರದಿ ಬಹಿರಂಗಪಡಿಸಿದೆ. ಉದಾಹರಣೆಗೆ ಅವರಿಗೆ ವೈದ್ಯರು, ಶಿಕ್ಷಕರು, ಚುನಾಯಿತ ರಾಜಕಾರಣಿಗಳು, ಅಧಿಕಾರಿಗಳು ನಿರೀಕ್ಷಕರು ಇತರ ಸರಕಾರಿ ಉದ್ಯೋಗಿಗಳು ಹಾಗೂ ಆರೋಗ್ಯ ಕಾರ್ಯಕರ್ತರ ಪರಿಚಯವು ಉಳಿದ ಪಂಗಡಗಳಿಗಿಂತ ಅಧಿಕವಾಗಿರುತ್ತದೆ.
ಬ್ರಾಹ್ಮಣರ ತುಷ್ಟೀಕರಣ
ಆದಾಗ್ಯೂ ಬ್ರಾಹ್ಮಣರಲ್ಲಿ ಬಡತನದ ಸಮಸ್ಯೆಯು ಖಂಡಿತವಾಗಿಯೂ ಇಲ್ಲ ಎನ್ನಲು ಸಾಧ್ಯವಿಲ್ಲ. ಬಡತನವೆಂಬುದು ದೇಶದ ಇತರ ಸಮುದಾಯಗಳ ಜನರಂತೆ ಬ್ರಾಹ್ಮಣರನ್ನು ಕೂಡಾ ಬಾಧಿಸುತ್ತಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಥವಾ ಸಬ್ಸಿಡಿ ದರದಲ್ಲಿ ಆಹಾರ ಪೂರೈಕೆ ಮಾಡುವ ಸಾರ್ವಜನಿಕ ವಿತರಣಾ ಕಾರ್ಯಕ್ರಮದಂತಹ ಹಲವಾರು ಸಾರ್ವತ್ರಿಕ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನಗಳು ದೇಶದ ಎಲ್ಲಾ ಬಡವರಿಗೂ ದೊರೆಯುವಂತಾಗಬೇಕು. ಆದಾಗ್ಯೂ ಈ ಸಾರ್ವತ್ರಿಕ ಕಾರ್ಯಕ್ರಮಗಳು ದೇಶದ ಎಲ್ಲಾ ಬಡಜನರನ್ನು ತಲುಪುವಷ್ಟು ಶಕ್ತವಾಗಿದೆಯೇ ಎಂಬ ಪ್ರಶ್ನೆಯೂ ಮೂಡುವುದು ಸಹಜ. ಕೋವಿಡ್-19 ಸಾಂಕ್ರಾಮಿಕದ ಹಾವಳಿಯ ಸಂದರ್ಭದಲ್ಲಿ ಈ ಕಾರ್ಯಕ್ರಮಗಳ ಗಂಭೀರ ಲೋಪಗಳನ್ನು ಎತ್ತಿತೋರಿಸಿತ್ತು. ಹೀಗಾಗಿ, ಭಾರತವು ಬ್ರಾಹ್ಮಣರು ಸೇರಿದಂತೆ ಸಮಾಜದ ಎಲ್ಲಾ ಸಮುದಾಯಗಳ ಜನರನ್ನು ತಲುಪುವಂತೆ ಮಾಡಲು ತನ್ನ ಜನಕಲ್ಯಾಣ ಕಾರ್ಯಕ್ರಮಗಳನ್ನು ಬಲಪಡಿಸುವ ಅಗತ್ಯವಿದೆಯೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಬ್ರಾಹ್ಮಣರಿಗಾಗಿಯೇ ಪ್ರತ್ಯೇಕ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಖಂಡಿತವಾಗಿಯೂ ಯಾವುದೇ ಸಮರ್ಥನೆ ನೀಡಲು ಸಾಧ್ಯವಿಲ್ಲ. ರಾಜಕೀಯಶಾಸ್ತ್ರದ ಸಂಶೋಧಕ ಪ್ರತಾಪ್ ಭಾನು ಮೆಹ್ತಾ ಹೇಳುವಂತೆ ಬ್ರಾಹ್ಮಣರಿಗೆ ವಿಶೇಷ ಯೋಜನೆಗಳನ್ನು ಪ್ರಕಟಿಸುವುದು ಸಾಂವಿಧಾನಿಕ ಮೌಲ್ಯಗಳ ವಿಚಿತ್ರವಾದ ವಿಕೃತಿಯಾಗಿದೆ ಎಂದು ಅವರು ವಾದಿಸುತ್ತಾರೆ.
ಬ್ರಾಹ್ಮಣರಿಗೆ ವಿಶೇಷ ಸವಲತ್ತುಗಳನ್ನು ಘೋಷಿಸಿ ಮೂರು ರಾಜ್ಯಗಳು ಜಾರಿಗೊಳಿಸಿರುವ ಕ್ರಮಗಳು ಜಾತೀಯತೆಯ ಕಬಂಧಬಾಹುವನ್ನು ದುರ್ಬಲಗೊಳಿಸಲು ಏನನ್ನು ಮಾಡಬೇಕಾದ ಅಗತ್ಯವಿದೆಯೋ ಅದಕ್ಕೆ ತದ್ವಿರುದ್ಧವಾಗಿದೆ. ಇವು ರಾಜಕೀಯ, ಚುನಾವಣಾ ಅಥವಾ ಸೈದ್ಧಾಂತಿಕ ಪರಿಗಣನೆಗಳಿಂದ ಪ್ರೇರಿತವಾಗಿರಬಹುದಾಗಿದೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವುದಕ್ಕಾಗಿ ಜಾರಿಗೊಳಿಸಲಾದ ಕಾರ್ಯಕ್ರಮಗಳಿಗಿಂತ ತೀರಾ ವಿಭಿನ್ನವಾಗಿದೆ. ವಿಶ್ವಗುರು ಅಥವಾ ಜಾಗತಿಕ ಸೂಪರ್‌ಪವರ್ ಆಗಲು ಹಂಬಲಿಸುತ್ತಿರುವ ಆಧುನಿಕ ಭಾರತದಲ್ಲಿ ಈ ‘ಬ್ರಾಹ್ಮಣ ತುಷ್ಟೀಕರಣ’ ನೀತಿಗಳಿಗೆ ಯಾವುದೇ ಸ್ಥಾನವನ್ನು ನೀಡಲು ಸಾಧ್ಯವಿಲ್ಲ ಎಂದು ಸಂಶೋಧನಾ ಪ್ರಬಂಧ ಅಭಿಪ್ರಾಯ ಪಡುತ್ತದೆ.
ಆಧಾರ: theprint.in