ಗುಜರಾತ್: ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಮೊದಲ ಬಾರಿ ಬಂಧಿತ ನಾಲ್ವರಿಗೆ ಜಾಮೀನು

Update: 2021-10-14 06:49 GMT

ಅಹಮದಾಬಾದ್: ಮದುವೆಯ ಮೂಲಕ ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ತಿದ್ದುಪಡಿ ಮಾಡಿದ ಕಾನೂನಿನ ಅಡಿಯಲ್ಲಿ ಗುಜರಾತ್‌ನಲ್ಲಿ ದಾಖಲಾದ ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ನಾಲ್ಕು ಜನರಿಗೆ ಬುಧವಾರ ಗುಜರಾತ್ ಹೈಕೋರ್ಟ್ ಜಾಮೀನು ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

ವಡೋದರದಲ್ಲಿರುವ 26 ವರ್ಷದ ಸಮೀರ್ ಖುರೇಶಿ ವಿರುದ್ಧ ನಕಲಿ ಕ್ರಿಶ್ಚಿಯನ್ ಗುರುತನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಂದಿಗೆ ಮಾತನಾಡಿದ ಹಾಗೂ  ಆಕೆಯನ್ನು  ಮದುವೆಯಾಗಲು ಒತ್ತಾಯಿಸಿದ ಆರೋಪದ ಮೇಲೆ ಜೂನ್ ನಲ್ಲಿ ಪ್ರಕರಣ ದಾಖಲಾಗಿತ್ತು.

ಆ ವ್ಯಕ್ತಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಮತ್ತು ತನ್ನ ಖಾಸಗಿ ಫೋಟೋಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ವ್ಯಕ್ತಿಯ ಪೋಷಕರು, ಸಹೋದರಿ ಹಾಗೂ  ಚಿಕ್ಕಪ್ಪ ಕೂಡ ಆತನಿಗೆ ಅಪರಾಧದಲ್ಲಿ ಸಹಾಯ ಮಾಡಿದ್ದಾರೆ.

ಖುರೇಶಿಯ ಪೋಷಕರು, ಚಿಕ್ಕಪ್ಪ, ಸಹೋದರಿ ಹಾಗೂ  ಸೋದರಸಂಬಂಧಿ ಸೇರಿದಂತೆ ಎಂಟು ಜನರನ್ನು ಪ್ರಕರಣದಲ್ಲಿ ದಾಖಲಾದ ಮೊದಲ ಮಾಹಿತಿ ವರದಿಯಲ್ಲಿ ಹೆಸರಿಸಲಾಗಿದೆ.

ಆದಾಗ್ಯೂ, ಎಫ್‌ಐಆರ್ ದಾಖಲಾದ 1 ತಿಂಗಳ ನಂತರ ಫೆಬ್ರವರಿಯಲ್ಲಿ ತಮ್ಮ ಕುಟುಂಬಗಳ ಒಪ್ಪಿಗೆಯ ಮೇರೆಗೆ ತಾನು ಹಾಗೂ  ಖುರೇಷಿ ಮದುವೆಯಾಗಿದ್ದೇವೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.

ಮಹಿಳೆ ಮತ್ತು ಆರೋಪಿಗಳು ಗುಜರಾತ್ ಹೈಕೋರ್ಟ್ ಮೊರೆ ಹೋದರು. ಎಫ್ಐಆರ್ ರದ್ದುಗೊಳಿಸುವಂತೆ ಕೇಳಿದರು. ಮಹಿಳೆ ತನ್ನ ದೂರನ್ನು 'ಕ್ಷುಲ್ಲಕ ಕೌಟುಂಬಿಕ ವೈವಾಹಿಕ ಸಮಸ್ಯೆಯನ್ನು' ಆಧರಿಸಿದೆ. ಅದನ್ನು ಅಂತಿಮವಾಗಿ ಪರಿಹರಿಸಲಾಯಿತು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು ಎಂದು  ಪಿಟಿಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News