ಅದಾನಿ ಬಂದರಿನಲ್ಲಿ ಪತ್ತೆಯಾದ ಭಾರೀ ಡ್ರಗ್ಸ್ ಪ್ರಕರಣ ಬೇರಡೆ ಸೆಳೆಯಲು ಬಿಎಸ್ ಎಫ್ ವ್ಯಾಪ್ತಿ ವಿಸ್ತರಣೆ: ಕಾಂಗ್ರೆಸ್

Update: 2021-10-14 09:07 GMT

ಹೊಸದಿಲ್ಲಿ: ಪಂಜಾಬ್‌ನಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸುವ ಏಕಪಕ್ಷೀಯ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಇಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು ಹಾಗೂ  ಗುಜರಾತ್ ನಲ್ಲಿ  ಅದಾನಿ ನಡೆಸುತ್ತಿರುವ ಮುಂಡ್ರಾ ಬಂದರಿನ ಮೂಲಕ ಇತ್ತೀಚೆಗೆ ಭಾರೀ ಪ್ರಮಾಣದ  ಹೆರಾಯಿನ್ ಪತ್ತೆಯಾದ ಪ್ರಕರಣದ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದಿದ್ದಾರೆ.

ಮುಂದಿನ ವರ್ಷ ಎರಡೂ ರಾಜ್ಯಗಳಲ್ಲಿ  ಚುನಾವಣೆ ನಡೆಯಲಿದೆ. ಪಂಜಾಬ್ ನಲ್ಲಿ  ಕಾಂಗ್ರೆಸ್ ಅಧಿಕಾರದಲ್ಲಿದೆ ಹಾಗೂ  ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ.  .

ಗೃಹ ಸಚಿವ ಅಮಿತ್ ಶಾ ಅವರ “ಕ್ರೊನೊಲಾಜಿ ಸಂಜಿಯೇ’(ಕಾಲಗಣನೆ ಅರ್ಥಮಾಡಿಕೊಳ್ಳಿ)  ಎಂಬ  ಹೇಳಿಕೆಯಿಂದ ಸ್ಫೂರ್ತಿ ಪಡೆದ ಸುರ್ಜೆವಾಲಾ ಅವರು ಜೂನ್ ತಿಂಗಳಲ್ಲಿ ಮುಂಡ್ರಾ ಬಂದರಿನ ಮೂಲಕ  ಹಾದುಹೋದ 25,000 ಕೆಜಿ ಹೆರಾಯಿನ್ ಹಾಗೂ   ಅದೇ ಬಂದರಿನಲ್ಲಿ ಸೆಪ್ಟೆಂಬರ್‌ 13 ರಂದು  ವಶಪಡಿಸಿಕೊಂಡ 3,000 ಕೆಜಿ (ರೂ. 20,000 ಕೋಟಿ ಮೌಲ್ಯದ) ಡ್ರಗ್ಸ್ ಅನ್ನು ಅವರು ಟ್ವಿಟರ್ ನಲ್ಲಿ ಉಲ್ಲೇಖಿಸಿದರು.

"ಗುಜರಾತ್ ನ ಅದಾನಿ ಬಂದರು  ಮೂಲಕ 25,000 ಕೆಜಿ ಹೆರಾಯಿನ್ 9/6/2021 ರಂದು ಬಂದಿತು. 13/9/2021 ರಂದು ಗುಜರಾತ್‌ನ ಅದಾನಿ ಬಂದರಿನಲ್ಲಿ 3,000 ಕೆಜಿ ಹೆರಾಯಿನ್ ಹಿಡಿಯಲಾಗಿದೆ. ಪಂಜಾಬ್‌ನಲ್ಲಿ ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯನ್ನು ಏಕಪಕ್ಷೀಯವಾಗಿ 15 ಕಿಮೀ ನಿಂದ 50 ಕಿಮೀಗೆ ಹೆಚ್ಚಿಸಲಾಗಿದೆ.  ಒಕ್ಕೂಟ ವ್ಯವಸ್ಥೆ ಸತ್ತಿದೆ. ಪಿತೂರಿ ಸ್ಪಷ್ಟ"ಎಂದು ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

ಗುಜರಾತಿನ ಮತದಾರರಿಗೆ ಆ ರಾಜ್ಯದಲ್ಲಿ ಮಾದಕ ವಸ್ತುಗಳ ಸಾಗಣೆಯಾಗಿದ್ದನ್ನು ನೆನಪಿಸುವ ಪ್ರಯತ್ನವನ್ನು ಸುರ್ಜೆವಾಲಾ ತಮ್ಮ ಟ್ವೀಟ್ ಮೂಲಕ ಮಾಡಿದ್ದಾರೆ. ದೇಶದ ಎರಡು ಶಕ್ತಿಶಾಲಿ ಹುದ್ದೆಗಳಲ್ಲಿರುವ ಬಿಜೆಪಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ  ಗೃಹ ಸಚಿವ ಅಮಿತ್ ಶಾ  ಈ ಕುರಿತು ಯಾವುದೇ ಕ್ರಮ ತೆಗದುಕೊಂಡಿಲ್ಲ ಎಂದು ಹೇಳಿದ್ದಾರೆ.

ದೇಶದೊಳಗೆ ಭಾರೀ ಡ್ರಗ್ಸ್  ಪ್ರವೇಶಿಸುವುದನ್ನು ನಿಲ್ಲಿಸುವಲ್ಲಿ  ಕೇಂದ್ರದ ವಿಫಲತೆ ಯನ್ನು ಕಳೆದ ತಿಂಗಳು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪ್ರಶ್ನಿಸಿದ್ದರು ಹಾಗೂ ಡ್ರಗ್ಸ್  ಪ್ರಮಾಣವು ತೀವ್ರವಾಗಿ ಹೆಚ್ಚಾಗಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News