×
Ad

ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಪಡೆದಿರುವ ಪ್ರಜ್ಞಾ ಠಾಕುರ್ ಕಬಡ್ಡಿ ಆಡುತ್ತಿರುವ ವೀಡಿಯೊ ವೈರಲ್

Update: 2021-10-14 17:06 IST
Screengrab: Twitter/@Sreenivasiyc

ಭೋಪಾಲ್: ವೈದ್ಯಕೀಯ ಕಾರಣಗಳಿಗಾಗಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಜಾಮೀನು ಪಡೆದಿರುವ ಬಿಜೆಪಿಯ ಭೋಪಾಲ್ ಸಂಸದೆ ಪ್ರಜ್ಞಾ ಠಾಕುರ್ ಅವರು ಕಬಡ್ಡಿ ಆಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನ್ಯಾಯಾಲಯಕ್ಕೆ ಹಾಜರಾಗಬೇಕಾದಂತಹ ಸಮಯದಲ್ಲಿ ಆರೋಗ್ಯ ಸಮಸ್ಯೆಯ ನೆಪವೊಡ್ಡುವ ಹಾಗೂ ಗಾಲಿಕುರ್ಚಿಯಲ್ಲಿಯೇ ಕಾಣಿಸಿಕೊಳ್ಳುವ ಪ್ರಜ್ಞಾ ಠಾಕುರ್ ಅದು ಹೇಗೆ ಕಬಡ್ಡಿ ಆಡಿದ್ದಾರೆಂದು ಅವರ ರಾಜಕೀಯ ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ.

ತಮ್ಮ ತವರು ಕ್ಷೇತ್ರ ಭೋಪಾಲ್‍ನ ಮೈದಾನವೊಂದರಲ್ಲಿ ಮಹಿಳೆಯರ ಒಂದು ಗುಂಪಿನ ಜತೆಗೆ ಪ್ರಜ್ಞಾ ಠಾಕುರ್ ಕಬಡ್ಡಿ ಆಡುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ದೇವಸ್ಥಾನವೊಂದಕ್ಕೆ ಅವರು ಭೇಟಿ ನೀಡಿದ್ದ ಸಂದರ್ಭ ಕಬಡ್ಡಿ ಆಡುತ್ತಿದ್ದವರು ಪ್ರಜ್ಞಾ ಅವರನ್ನು ಆಹ್ವಾನಿಸಿದ್ದರು.

ಅವರ ಈ ವೀಡಿಯೋ ನೋಡಿ ಪ್ರತಿಕ್ರಿಯಿಸಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್, ಆಕೆಗೆ ವೈದ್ಯಕೀಯ ಕಾರಣಗಳಿಗಾಗಿ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿರುವುದನ್ನು ಉಲ್ಲೇಖಿಸಿದರಲ್ಲದೆ, ಆಕೆಯ ಆರೋಗ್ಯ ಉತ್ತಮವಾಗಿರುವಂತೆ ವೀಡಿಯೋದಲ್ಲಿ ಕಾಣಿಸುತ್ತಿದೆ ಎಂದಿದ್ದಾರೆ. "ಎನ್‍ಐಎ ನ್ಯಾಯಾಲಯದಲ್ಲಿ ಆಕೆಯ ಮುಂದಿನ ವಿಚಾರಣೆ ಯಾವಾಗ?'' ಎಂದೂ ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಇತ್ತೀಚೆಗಷ್ಟೇ ಅವರು ಭೋಪಾಲ್ ಕಾಲೇಜೊಂದರಲ್ಲಿ ಗರ್ಬಾ ನೃತ್ಯದಲ್ಲಿ ಭಾಗಿಯಾಗಿರುವ ವೀಡಿಯೊ ಕೂಡ ಸಾಕಷ್ಟು ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News