​ಅಫ್ಘಾನ್‌ನಿಂದ 100 ಫುಟ್ಬಾಲ್ ಆಟಗಾರ್ತಿಯರ ಸುರಕ್ಷಿತ ಸ್ಥಳಾಂತರ

Update: 2021-10-15 04:34 GMT
ಫೈಲ್ ಫೋಟೊ

ಹೊಸದಿಲ್ಲಿ: ತಾಲಿಬಾನ್‌ನಿಂದ ರಕ್ಷಣೆ ಒದಗಿಸುವ ಪ್ರಯತ್ನವಾಗಿ ಗಲಭೆಗ್ರಸ್ತ ಅಫ್ಘಾನಿಸ್ತಾನದಿಂದ ಸುಮಾರು 100 ಮಂದಿ ಫುಟ್ಬಾಲ್ ಆಟಗಾರ್ತಿಯರನ್ನು ಸುರಕ್ಷಿತವಾಗಿ ವಿಮಾನದಲ್ಲಿ ದೋಹಾಗೆ ಸ್ಥಳಾಂತರಿಸಲಾಗಿದೆ ಎಂದು ಕತರ್ ಸರ್ಕಾರ ಪ್ರಕಟಿಸಿದೆ.

"ಸುಮಾರು 100 ಮಂದಿ ಫುಟ್ಬಾಲ್ ಆಟಗಾರರು ಮತ್ತು ಅವರ ಕುಟುಂಬದವರು ವಿಮಾನದಲ್ಲಿದ್ದಾರೆ" ಎಂದು ಕತರ್‌ನ ಸಹಾಯಕ ವಿದೇಶಾಂಗ ಸಚಿವ ಲೋಲ್ವಾ ಅಲ್ ಖತೆರ್ ಟ್ವೀಟ್ ಮಾಡಿದ್ದಾರೆ.

ಇವರಲ್ಲಿ ಕನಿಷ್ಠ 20 ಮಂದಿ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡದ ಸದಸ್ಯರು ಸೇರಿದ್ದಾರೆ. ಈ ಆಟಗಾರ್ತಿಯರನ್ನು ಹಾಗೂ ಇತರರನ್ನು ಒಂದು ಆವರಣಕ್ಕೆ ಕರೆದೊಯ್ದು ಕೊರೋನ ವೈರಸ್ ಪರೀಕ್ಷೆಗೆ ಗುರಿಪಡಿಸಲಾಗುವುದು ಎಂದು ಸ್ಕೈ ಸ್ಪೋರ್ಟ್ಸ್ ನ್ಯೂಸ್ ವರದಿ ಮಾಡಿದೆ. ಆದರೆ ಇವರು ಎಷ್ಟು ಅವಧಿಯವರೆಗೆ ಕತರ್‌ನಲ್ಲಿ ಇರುತ್ತಾರೆ ಎನ್ನುವುದು ಸ್ಪಷ್ಟವಾಗಿಲ್ಲ.

ವಿಶ್ವ ಫುಟ್ಬಾಲ್ ನಿಯಂತ್ರಣ ಸಂಸ್ಥೆಯಾದ ಫಿಫಾ, ಅಫ್ಘಾನಿಸ್ತಾನದಿಂದ ಫುಟ್ಬಾಲ್ ಆಟಗಾರರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಕತರ್ ಸರ್ಕಾರದ ಜತೆ ನಿಕಟ ಸಂಪರ್ಕ ಹೊಂದಿದೆ. ಅಫ್ಘಾನಿಸ್ತಾನದ ಮಹಿಳಾ ರಾಷ್ಟ್ರೀಯ ತಂಡದ ಆಟಗಾರ್ತಿಯರನ್ನು ದೇಶದಿಂದ ಹೊರಕ್ಕೆ ಕರೆ ತರುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಆಟಗಾರರ ಸಂಘಟನೆಯಾದ ಎಫ್‌ಐಎಫ್‌ಪಿಆರ್‌ಓ, ವಿಮಾನ ಟಿಕೆಟ್‌ಗಳನ್ನು ಪಡೆಯಲು ಸಹಕರಿಸಿತ್ತು. ಅಫ್ಘಾನ್ ಸರ್ಕಾರ ಆಗಸ್ಟ್‌ನಲ್ಲಿ ಪತನಗೊಂಡು 20 ವರ್ಷಗಳ ಬಳಿಕ ತಾಲಿಬಾನ್ ಮತ್ತೆ ನಿಯಂತ್ರಣ ಸಾಧಿಸಿದ ಬಳಿಕ ಮಹಿಳಾ ಅಥ್ಲೀಟ್‌ಗಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಹಲವು ಆಟಗಾರ್ತಿಯರು ತಾಲಿಬಾನ್ ನಿಯಂತ್ರಣ ಸಾಧಿಸಿದ ತಕ್ಷಣ ತಲೆ ಮರೆಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News