ವಿಹಿಂಪ ಕಾರ್ಯಕರ್ತನ ಮೇಲೆ ಠಾಣೆಯಲ್ಲಿ ಹಲ್ಲೆ ಆರೋಪ; ಉಪ್ಪಿನಂಗಡಿಯ ಮೂವರು ಪೊಲೀಸರ ವಿರುದ್ಧ ಎಫ್‍ಐಆರ್, ವರ್ಗಾವಣೆ

Update: 2021-10-15 08:57 GMT

ಉಪ್ಪಿನಂಗಡಿ : ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಪರಿಸರದಲ್ಲಿದ್ದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನೋರ್ವನನ್ನು ಪೊಲೀಸರು ಠಾಣೆಗೆ ಕರೆದೊಯ್ದು ಅಕ್ರಮವಾಗಿ ಕೂಡಿ ಹಾಕಿ ಹಿಂಸಿಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ, ಮೂವರು ಪೊಲೀಸರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಆ ಪೊಲೀಸರನ್ನು ಎಸ್‍ಪಿ ಕಚೇರಿಗೆ ವರ್ಗಾವಣೆಗೊಳಿಸಲಾಗಿದೆ.

ದೇವಾಲಯದ ಪರಿಸರದಲ್ಲಿ ರವಿವಾರ ರಾತ್ರಿ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಈ ಘಟನೆಯ ಬಗ್ಗೆ ಒಂದು ಗುಂಪು ಪೊಲೀಸರಿಗೆ ಮಾಹಿತಿ ನೀಡಿತ್ತು. ಬಳಿಕ ಅಲ್ಲಿಗೆ ಪೊಲೀಸರು ತೆರಳಿದ್ದು, ಅಲ್ಲಿ ನಿಂತಿದ್ದ ಜಗದೀಶ್ ಎಂಬಾತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದರು. ಸೋಮವಾರ ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾದ ಜಗದೀಶ್ ಉಪ್ಪಿನಂಗಡಿಯ ಪೊಲೀಸ್ ಸಿಬ್ಬಂದಿ ಶೇಖರ ಗೌಡ, ಸಂಗಯ್ಯ ಹಾಗೂ ಪ್ರತಾಪ್ ಎಂಬವರು ತನ್ನನ್ನು ಅಕ್ರಮವಾಗಿ ಕೂಡಿ ಹಾಕಿ ಹಿಂಸಿಸಿದ್ದಾರೆ ಎಂದು ಆಪಾದಿಸಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಹಿಂದೂ ಪರಿಷತ್ ಮುಖಂಡರು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾಗಿ ಲಿಖಿತ ದೂರು ನೀಡಿದ್ದಲ್ಲದೆ, ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಬಳಿಕ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಮೂವರು ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ತನಿಖೆಯು ವಿಚಾರಣೆಯ ಹಂತದಲ್ಲಿದೆ. ಅಲ್ಲಿಯ ತನಕ ಈ ಮೂವರು ಪೊಲೀಸರನ್ನು ಎಸ್‍ಪಿ ಕಚೇರಿಗೆ ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News