×
Ad

ಧಾರ್ಮಿಕ ಅಲ್ಪಸಂಖ್ಯಾತ ಪ್ರಮಾಣ ಪತ್ರ ನೀಡುದಲ್ಲಿ ಪ್ರಮಾದ: ಸೂಕ್ತ ಕ್ರಮಕ್ಕಾಗಿ ಮನವಿ

Update: 2021-10-15 15:46 IST

ಮಂಗಳೂರು, ಅ.15: ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಪದವಿ/ಸ್ನಾತಕೋತ್ತರ ಪದವಿಯ ಖಾಸಗಿ ಕೋಟಾದ ಸೀಟುಗಳ ಪ್ರವೇಶ ಬಯಸುವ ವಿದ್ಯಾರ್ಥಿಗಳು ತಾಲೂಕು ತಹಶೀಲ್ದಾರರಿಂದ ನಿಗದಿತ ನಮೂನೆಯಲ್ಲಿ (ಅನುಬಂಧ 4ಎ) ಧಾರ್ಮಿಕ ಅಲ್ಪಸಂಖ್ಯಾತ ಪ್ರಮಾಣಪತ್ರ ಪಡೆದು ಆನ್‌ಲೈನ್ ಕೌನ್ಸಿಲಿಂಗ್‌ನ ದಾಖಲೆಗಳ ಪರಿಶೀಲನೆ ಸಂದರ್ಭ ಹಾಜರುಪಡಿಸಬೇಕೆಂಬುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮವಾಗಿದೆ, ಆದರೆ ನಿಗದಿತ ನಮೂನೆ (ಅನುಬಂಧ 4ಎ)ಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಪ್ರಮಾಣ ಪತ್ರ ನೀಡಲು ಕೆಲವು ತಹಶೀಲ್ದಾರರು ನಿರಾಕರಿಸಿ ತಮ್ಮದೇ ಮಾದರಿಯ ಕಂಪ್ಯೂಟರೀಕೃತ ಪ್ರಮಾಣ ಪತ್ರ ನೀಡುತ್ತಿದ್ದಾರೆ. ತಹಶೀಲ್ದಾರರ ಈ ಎಡವಟ್ಟಿನಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಂಗಳೂರಿನ ಕರಿಯರ್ ಗೈಡೆನ್ಸ್ ಆ್ಯಂಡ್ ಇನ್‌ ಫಾರ್ಮೇಶನ್ ಸೆಂಟರ್‌ನ ಸ್ಥಾಪಕಾಧ್ಯಕ್ಷ ಉಮರ್ ಯು.ಎಚ್. ಮನವಿ ಮಾಡಿದ್ದಾರೆ.

ತಹಶೀಲ್ದಾರರು ಪ್ರತ್ಯೇಕವಾಗಿ ನೀಡಿದ ಕಂಪ್ಯೂಟರೀಕೃತ ಪ್ರಮಾಣ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಂಗೀಕರಿಸುವುದಿಲ್ಲ, ಈ ಬಗ್ಗೆ ವಿದ್ಯಾರ್ಥಿಗಳು ಅನುಬಂಧ 4ಎ ನಮೂನೆಯಲ್ಲಿ ಪ್ರಮಾಣ ಪತ್ರ ನೀಡಿ ಎಂದು ಮನವಿ ಮಾಡಿದರೂ ಕೆಲವು ತಹಶೀಲ್ದಾರರು ನಮ್ಮಲ್ಲಿರುವುದು ಇದೇ ಮಾದರಿ. ಬೇರೆ ನಮೂನೆಯಲ್ಲಿ ಕೊಡಲು ಆಗುವುದಿಲ್ಲ ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು.ಜಿಲ್ಲಾಧಿಕಾರಿ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ ನೀಡುವಂತೆ (ಸರಕಾರಿ ಆದೇಶ-MWD 330 MDS 2020)ತಿಳಿಸಲಾಗಿದೆ. ಕಳೆದ ವರ್ಷ ಅನುಬಂಧ 4ಎ ನಮೂನೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿರುವ ತಹಶಿಲ್ದಾರರೇ ಈ ವರ್ಷ ವಿದ್ಯಾರ್ಥಿಗಳನ್ನು ಸತಾಯಿಸುತ್ತಿದ್ದಾರೆ ಎಂದು ಉಮರ್ ಯು.ಎಚ್. ಆರೋಪಿಸಿದ್ದಾರೆ.

ನೀಟ್ ಪರೀಕ್ಷೆ ಬರೆದು, ಆನ್‌ಲೈನ್ ಕೌನ್ಸಿಲಿಂಗ್‌ಗೆ ದಾಖಲೆಗಳನ್ನು ಸಿದ್ದಪಡಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಪಾಲಕರು ಕೆಲವು ತಹಶಿಲ್ದಾರರ ಈ ನಡೆಯಿಂದ ಕಂಗಾಲಾಗಿದ್ದಾರೆ. ಈ ಬಗ್ಗೆ ಸೂಕ್ತ ತುರ್ತು ಕ್ರಮಕೈಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಸಾಂತ್ವನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News