ಇಂದು ಐಪಿಎಲ್ ಫೈನಲ್: ಚೆನ್ನೈ-ಕೋಲ್ಕತಾ ಹಣಾಹಣಿ

Update: 2021-10-15 10:28 GMT

ದುಬೈ: ಯುಎಇನಲ್ಲಿ ನಡೆಯುತ್ತಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ಶುಕ್ರವಾರ ರಾತ್ರಿ 7:30ಕ್ಕೆ ಆರಂಭವಾಗಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ.  

ಚೆನ್ನೈ ತಂಡ ಈ ಋತುವಿನಲ್ಲಿ ಕೋಲ್ಕತಾ ವಿರುದ್ದ ಆಡಿರುವ ಎರಡೂ ಲೀಗ್ ಪಂದ್ಯಗಳನ್ನು ಗೆದ್ದುಕೊಂಡಿದೆ.  ಎ.21ರಂದು ಮುಂಬೈನಲ್ಲಿ ನಡೆದ ಪಂದ್ಯದಲ್ಲಿ 18 ರನ್ ನಿಂ ದ ಜಯ ಸಾಧಿಸಿರುವ ಚೆನ್ನೈ ಸೆ.26ರಂದು ಅಬುಧಾಬಿಯಲ್ಲಿ 2 ವಿಕೆಟ್ ಗಳಿಂದ ಜಯ ಸಾಧಿಸಿತ್ತು.

ಈ ಹಿಂದೆ ಎರಡು ಬಾರಿ ಐಪಿಎಲ್ ಫೈನಲ್ ಗೆ ತಲುಪಿದ್ದ ಕೆಕೆಆರ್ ಎರಡೂ ಬಾರಿಯೂ ಜಯ ಸಾಧಿಸಿದ್ದು, ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. 2012ರಲ್ಲಿ ಚೆನ್ನೈನಲ್ಲಿ ಚೆನ್ನೈ ತಂಡವನ್ನು ಮಣಿಸಿದ್ದ ಕೋಲ್ಕತಾ ತಂಡ 2014ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಫೈನಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 3 ವಿಕೆಟ್ ಗಳಿಂದ ಮಣಿಸಿತ್ತು. 190ಕ್ಕೂ ಅಧಿಕ ರನ್ ಚೇಸಿಂಗ್ ಮಾಡಿ ಎರಡು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಜಯಿಸಿದ ಏಕೈಕ ತಂಡ ಕೆಕೆಆರ್.

ಎಂ.ಎಸ್. ಧೋನಿ 11ನೇ ಬಾರಿ ಐಪಿಎಲ್ ಫೈನಲ್ ನಲ್ಲಿ ಆಡಲು ಸಜ್ಜಾಗಿದ್ದಾರೆ. ಸಿಎಸ್ ಕೆ ಪರ 9 ಬಾರಿ ಫೈನಲ್ ಪಂದ್ಯವನ್ನಾಡಿರುವ ಧೋನಿ, 2017ರಲ್ಲಿ ಆರ್ ಪಿಎಸ್ ಪರ  ಫೈನಲ್ ಆಡಿದ್ದರು.  2010, 2011 ಹಾಗೂ 2018 ಮೂರು ಬಾರಿ ಚೆನ್ನೈಗೆ ಐಪಿಎಲ್ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು.

ಚೆನ್ನೈ ಸೂಪರ್ ಕಿಂಗ್ಸ್  ಆರಂಭಿಕ ಬ್ಯಾಟ್ಸ್ ಮನ್ ಋತುರಾಜ್ ಗಾಯಕ್ವಾಡ್ ಒಟ್ಟು 603 ರನ್ ಗಳಿಸಿದ್ದು, ಎದುರಾಳಿ ಕೆಕೆಆರ್ ನ ಶುಭಮನ್ ಗಿಲ್ ಒಟ್ಟು 427 ರನ್ ಗಳಿಸಿದ್ದಾರೆ.  ಈ ಇಬ್ಬರುಸ್ಟಾರ್ ಬ್ಯಾಟ್ಸ್ ಮನ್ ಗಳು ಫೈನಲ್ ನಲ್ಲಿ ಮತ್ತೆ ಮಿಂಚಲು ಎದುರು ನೋಡುತ್ತಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಚೆನ್ನೈನ ಶಾರ್ದೂಲ್ ಠಾಕೂರ್(18 ವಿಕೆಟ್ ಗಳು) ಹಾಗೂ ಕೆಕೆಆರ್ ನ ವರುಣ್ ಚಕ್ರವರ್ತಿ(18) ತಲಾ 18 ವಿಕೆಟ್ ಗಳನ್ನು ಪಡೆದು ತಮ್ಮ ತಂಡದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News